ರಾಹುಲ್ ಗಾಂಧಿ ತಮ್ಮ ತಾಯಿಯನ್ನು ಬಿಟ್ಟು ಕೇರಳಕ್ಕೆ ಬರಬಾರದಿತ್ತು:ಬಿ.ವೈ ರಾಘವೇಂದ್ರ

ಕುಂದಾಪುರ: ಅಮೇಠಿಯಲ್ಲಿ ತಾನು ಗೆಲ್ಲುವುದಿಲ್ಲ ಎಂಬ ವರದಿಯ ನಂತರ ರಾಹುಲ್ ಗಾಂಧಿ ತಮ್ಮ ತಾಯಿ ಒಬ್ಬರನ್ನೇ ಬಿಟ್ಟು ಕೇರಳಕ್ಕೆ ವಲಸೆ ಬಂದಿದ್ದಾರೆ. ಇಂತಹ ಸಂದರ್ಭದಲ್ಲಿ ರಾಹುಲ್ ಗಾಂಧಿ ತಾಯಿ ಒಬ್ಬರನ್ನೆ ಬಿಟ್ಟು ಬರಬಾರದಿತ್ತು. ಅವರನ್ನೂ ವಯನಾಡುಗೆ ಕರೆದುಕೊಂಡು ಬರಬೇಕಿತ್ತು ಎಂದು ಶಿವಮೊಗ್ಗ ಲೋಕಸಭಾ ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ವ್ಯಂಗ್ಯವಾಡಿದರು.

ಅವರು ಮಂಗಳವಾರ ಮಧ್ಯಾಹ್ನ ನೆಂಪುವಿನಲ್ಲಿರುವ ಬೈಂದೂರು ಶಾಸಕ ಸುಕುಮಾರ್ ಶೆಟ್ಟಿಯವರ ಮನೆಯಲ್ಲಿ ಆಯೋಜಿಸಲಾದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಸಚಿವ ರೇವಣ್ಣ ಯಾವಾಗಲೂ ಕೈಯ್ಯಲ್ಲಿ ನಿಂಬೆ ಹಣ್ಣು ಇಟ್ಟುಕೊಂಡು ತಿರುಗಾಡುತ್ತಾರೆ. ಇಲ್ಲಿ ಯಾವ ನಿಂಬೆ ಹಣ್ಣು ಕೆಲಸ ಮಾಡಿದೆಯೋ ಗೊತ್ತಿಲ್ಲ. ಜೆಡಿಎಸ್ ಹೇಳಿದ್ದಕ್ಕೆಲ್ಲಾ ಕಾಂಗ್ರೆಸ್ ತಲೆಯಾಡಿಸುತ್ತಿದೆ. ನರೇಂದ್ರ ಮೋದಿಯವರು ಕಾಂಗ್ರೆಸ್ ಮುಕ್ತ ಭಾರತಕ್ಕೆ ಪ್ರಯತ್ನ ಮಾಡಿದರೆ ಜೆಡಿಎಸ್ ಕೈ ಚಿಹ್ನೆಯನ್ನೇ ಮುಳುಗಿಸುವ ಮೂಲಕ ಕಾಂಗ್ರೆಸ್ ಅಂತ್ಯಕ್ಕೆ ಮುಂದಾಗಿದೆ. ಇನ್ನಾದರೂ ಸ್ವಾಭಿಮಾನಿ ಕಾಂಗ್ರೆಸಿಗರು ಮೋದಿಜಿಯವರನ್ನು ಬೆಂಬಲಿಸಬೇಕಾಗಿದೆ ಎಂದರು.

ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ, ಬಿಜೆಪಿ ಕ್ಷೇತ್ರಾಧ್ಯಕ್ಷ ಸದಾನಂದ ಉಪ್ಪಿನಕುದ್ರು, ಬಿಜೆಪಿ ಮುಖಂಡರಾದ ಪ್ರವೀಶ್ ಶೆಟ್ಟಿ ಗುರ್ಮೆ, ಬಾಲಚಂದ್ರ ಭಟ್, ರೈತ ಮೋರ್ಚಾದ ದತ್ತಾತ್ರೇಯ ಹಾಗೂ ದೀಪಕ್ ಕುಮಾರ್ ಶೆಟ್ಟಿ ಇದ್ದರು.