ಕನ್ನಡ ಶಾಲೆಗಾಗಿ ಬೃಹತ್ ಮೊತ್ತದ ದೇಣಿಗೆ ನೀಡಿದ ಉದ್ಯಮಿ ಎಚ್. ಎಸ್. ಶೆಟ್ಟಿಯವರಿಗೆ ಅಭಿನಂದನಾ ಕಾರ್ಯಕ್ರಮ

ಉಡುಪಿ : ನಿಟ್ಟೂರು ಪ್ರೌಢಶಾಲೆಯಲ್ಲಿ ಪಠ್ಯ ಹಾಗೂ ಪಠ್ಯೇತರ ವಿಭಾಗಗಳಲ್ಲಿ ನಡೆಯುತ್ತಿರುವ ಸಮಾಜ ಮುಖಿಯಾದ ಚಟುವಟಿಕೆಗಳನ್ನು ಮೆಚ್ಚಿ ತಮ್ಮ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿ ಮೂಲಕ ಬೃಹತ್ ಮೊತ್ತದ ದೇಣಿಗೆ ನೀಡಿದ ಬೆಂಗಳೂರಿನ ಉದ್ಯಮಿ ಎಚ್. ಎಸ್. ಶೆಟ್ಟಿಯವರಿಗೆ ಗೌರವ ಪೂರ್ವಕ ಕೃತಜ್ಞತೆಯ ದ್ಯೋತಕವಾಗಿ ಶಾಲಾ ಹಳೆ ವಿದ್ಯಾರ್ಥಿಗಳು 10ನೇ ತರಗತಿ ವಿದ್ಯಾರ್ಥಿ ದೀಕ್ಷಿತ್ ಹಾಗೂ ದ್ವಿತೀಯ ಪದವಿ ಓದುತ್ತಿರುವ ಹಳೆ ವಿದ್ಯಾರ್ಥಿನಿ ರಕ್ಷಿತಾಳಿಗೆ ನಿರ್ಮಿಸಿದ ‘ಶ್ರೀನಿವಾಸ’ ಮನೆಯ ಉದ್ಘಾಟನೆ ಡಿಸೆಂಬರ್ 5, ರಂದು ಕರಂಬಳ್ಳಿಯಲ್ಲಿ ಜರಗಿತು.

ಬೆಂಗಳೂರಿನ ಉದ್ಯಮಿಗಳಾದ ಎಚ್. ಎಸ್. ಶೆಟ್ಟಿಯವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ನನ್ನಿಂದ ನೆರವು ಸ್ವೀಕರಿಸಿದ ಯಾವುದೇ ಸಂಸ್ಥೆ ಈ ರೀತಿ ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸಿ ಕೃತಜ್ಞತೆ ತೋರಿಸಿದ ಸಂದರ್ಭವಿಲ್ಲ. ಮಾದರಿ ಶಾಲೆಯ ಆಡಳಿತ ಮಂಡಳಿಗಳಿಗೆ ಹಾಗೂ ಹಳೆವಿದ್ಯಾರ್ಥಿಗಳಿಗೆ ನಾನು ಋಣಿಯಾಗಿದ್ದೇನೆ. ನಾನು ಈ ಸಂಸ್ಥೆಯ ಭಾಗವಾಗಿರುವುದು ಹೆಮ್ಮೆಯ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು.

ಶಾಸಕ ಹಾಗೂ ನಿಟ್ಟೂರು ಎಜುಕೇಶನಲ್ ಸೊಸೈಟಿಯ ಅಧ್ಯಕ್ಷ ಕೆ. ರಘುಪತಿ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ ಕನ್ನಡ ಮಾಧ್ಯಮ ಶಾಲೆಯ ಏಳಿಗೆಗಾಗಿ ತನ್ನ ಲಾಭಾಂಶದ ದೊಡ್ಡ ಭಾಗವನ್ನು ವಿನಿಯೋಗಿಸುತ್ತಿರುವ ಎಚ್. ಎಸ್. ಶೆಟ್ಟಿ ಇವರು ಸಂಪತ್ತುಳ್ಳ ಸಾಧಕರಿಗೆ ಆದರ್ಶವಾಗಿದ್ದಾರೆ ಎಂದು ಅಭಿನಂದಿಸಿ ನುಡಿದರು.

ಯಕ್ಷಗಾನ ಕಲಾರಂಗದ ಅಧ್ಯಕ್ಷ ಹಾಗೂ ಮನೆಯ ಇಂಜಿನೀಯರ್ ಎಂ. ಗಂಗಾಧರ ರಾವ್, ಹೆಗ್ಗುಂಜೆ ಸೊಸೈಟಿಯ ಉಪಾಧ್ಯಕ್ಷ ಎಚ್. ನಾಗರಾಜ ಶೆಟ್ಟಿ ಅಭ್ಯಾಗತರಾಗಿ ಪಾಲ್ಗೊಂಡರು.

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯೋಗೀಶ್ಚಂದ್ರಾಧರ ಸ್ವಾಗತಿಸಿದರು. ನಿವೃತ್ತ ಮುಖ್ಯೋಪಾಧ್ಯಾಯ ಮುರಲಿ ಕಡೆಕಾರ್ ನಿರೂಪಿಸಿದರು.

ಸಮಾರಂಭದಲ್ಲಿ ರಾಘವೇಂದ್ರ ಕಿಣಿ, ವಿ. ಜಿ. ಶೆಟ್ಟಿ, ವಿಶ್ವನಾಥ ಶೆಣೈ, ಡಾ. ನಿತ್ಯಾನಂದ ಶೆಟ್ಟಿ, ಎಚ್. ರಾಜೀವ ಶೆಟ್ಟಿ, ಪಿ. ವೇಣುಗೋಪಾಲ ಆಚಾರ್ಯ, ಗಿರಿಧರ ಆಚಾರ್ಯ, ಜಯಂತಿ ಪೂಜಾರಿ, ಪಿ. ದಿನೇಶ್ ಪೂಜಾರಿ, ಡಾ. ಪ್ರತಿಮಾ ಜಯಪ್ರಕಾಶ್, ಹರೀಶ ಆಚಾರ್ಯ, ಶಶಿಪ್ರಭಾ ಕಾರಂತ್, ಇಂದಿರಾವತಿ, ಸದಾನಂದ ನಾಯಕ್, ಸಂತೋಷ ಕರ್ನೇಲಿಯೋ, ವಸಂತ ಪೂಜಾರಿ, ಹಯವದನ ಭಟ್, ವಿಜಯೇಂದ್ರ ಶೆಟ್ಟಿ, ಎಚ್. ಎನ್. ಶೃಂಗೇಶ್ವರ, ಶಾಲಾ ಮುಖ್ಯ ಶಿಕ್ಷಕಿ ಅನಸೂಯ, ಶಾಲಾ ಅಧ್ಯಾಪಕವೃಂದ ಹಾಗೂ 10ನೇ ತರಗತಿಯ ವಿದ್ಯಾರ್ಥಿವೃಂದ ಉಪಸ್ಥಿತರಿದ್ದರು.