ಯುವಕ ಯುವತಿಯರು ಜೀವನದಲ್ಲಿ ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಂಡು ದೇಶ ಕಟ್ಟುವ ನಾಯಕರಾಗಬೇಕು: ಡಾ.ಲಕ್ಷ್ಮಣ ಕುಕ್ಕುಡೆ

ಗಂಗೊಳ್ಳಿ : ಯುವಕ ಯುವತಿಯರು ಜೀವನದಲ್ಲಿ ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಂಡು ದೇಶ ಕಟ್ಟುವ ನಾಯಕರಾಗಬೇಕು. ಉನ್ನತ ಶಿಕ್ಷಣ ಪಡೆಯುವ ಮೂಲಕ ಸಶಕ್ತರಾಗಬೇಕು ಎಂದು ಮಂಗಳೂರು ಯುನಿರ್ವಸಿಟಿ ಕಾಲೇಜಿನ ಅಸೋಸಿಯೆಟ್ ಪ್ರೋಫೆಸರ್ ಡಾ.ಲಕ್ಷ್ಮಣ ಕುಕ್ಕುಡೆ ಹೇಳಿದರು.
ಮೇಲ್‍ಗಂಗೊಳ್ಳಿಉ ಪೋರ್ಟ್ ಬಂಗ್ಲೆ ಮೈದಾನದಲ್ಲಿ ಜರಗಿದ ಡಾ.ಅಂಬೇಡ್ಕರ್ ಯುವಕ ಮಂಡಲ ಮೇಲ್‍ಗಂಗೊಳ್ಳಿ ಇದರ 32ನೇ ವಾರ್ಷಿಕೋತ್ಸವ, ಅಮೃತ ಯುವತಿ ಮಂಡಲ ಮತ್ತು ಅರ್ಚನಾ ಮಹಿಳಾ ಮಂಡಲ ಮೇಲ್‍ಗಂಗೊಳ್ಳಿ ಇವುಗಳ 26ನೇ ವಾರ್ಷಿಕೋತ್ಸವ ಸಮಾರಂಭ ಹಾಗೂ ಡಾ.ಬಿ.ಆರ್.ಅಂಬೇಡ್ಕರ್‍ರವರ 128ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಿದ್ಧಾಪುರದ ಉದ್ಯಮಿ ವಿರೂಪಾಕ್ಷ ಬಾರ್ಕೂರು ಶುಭಾಶಂಸನೆಗೈದರು. ದ.ಕ. ಮತ್ತು ಉಡುಪಿ ಜಿಲ್ಲಾ ಮೀನುಗಾರರ ಫೆಡರೇಶನ್ ನಿರ್ದೇಶಕ ಎ.ಆನಂದ ಖಾರ್ವಿ ಬಹುಮಾನ ವಿತರಿಸಿದರು. ಇದೇ ಸಂದರ್ಭ ಭಾರತೀಯ ಭೂಸೇನೆಯ ಮಾಜಿ ಸೈನಿಕ ರಾಜೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಡಾ.ಅಂಬೇಡ್ಕರ್ ಜನ್ಮದಿನಾಚರಣೆ ಪ್ರಯುಕ್ತ ಗಂಗೊಳ್ಳಿ ಗ್ರಾಮ ಮಟ್ಟದ ಶಾಲಾ ಕಾಲೇಜಿನಲ್ಲಿ ವ್ಯಾಸಾಂಗ ಮಾಡಿ ಶೈಕ್ಷಣಿಕ ನಗದು ಪ್ರೋತ್ಸಾಹಕ ಬಹುಮಾನ ಪಡೆಯಲು ಆಯ್ಕೆಯಾದ ಪ.ಜಾತಿ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಿಸಲಾಯಿತು. ಗುಜ್ಜಾಡಿ ಪಶು ಚಿಕಿತ್ಸಾಲಯದ ಪಶು ವೈದ್ಯಾಧಿಕಾರಿ ಡಾ.ಅರುಣ ಕೆ.ಪಿ. ಧ್ವಜಾರೋಹಣಗೈದರು. ಯುವತಿ ಮಂಡಲದ ಅಧ್ಯಕ್ಷೆ ಉಷಾ, ಮಹಿಳಾ ಮಂಡಲದ ಅಧ್ಯಕ್ಷೆ ಹೇಮಾ ಮತ್ತಿತರರು ಉಪಸ್ಥಿತರಿದ್ದರು.
ಯುವಕ ಮಂಡಲದ ಅಧ್ಯಕ್ಷ ನಾಗೇಶ ಸ್ವಾಗತಿಸಿದರು. ಸ್ಥಾಪಕ ಅಧ್ಯಕ್ಷ ಭಾಸ್ಕರ ಎಚ್.ಜಿ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಂಜಿತ್ ಮತ್ತು ಸಹನಾ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಕಾರ್ಯದರ್ಶಿ ಪುನೀತ್ ವರದಿ ವಾಚಿಸಿದರು. ಗಣೇಶ್ ಗಂಗೊಳ್ಳಿ ಕಾರ್ಯಕ್ರಮ ನಿರೂಪಿಸಿದರು. ಅಕ್ಷಯ್ ವಂದಿಸಿದರು.