ಚಿತ್ರದುರ್ಗ: ರಾಜ್ಯದ ಪ್ರತಿ ಹಳ್ಳಿಗೂ ಬಸ್ ಸಂಪರ್ಕ ಕಲ್ಪಿಸಲು ರಾಜ್ಯ ಸರ್ಕಾರ ಶಕ್ತಿಮೀರಿ ಪ್ರಯತ್ನಿಸಲಿದೆ. ಇದರಲ್ಲಿ ಲಾಭ–ನಷ್ಟದ ಲೆಕ್ಕಾಚಾರ ಹಾಕುವ ಪ್ರಶ್ನೆಯೇ ಇಲ್ಲ. ಹಳ್ಳಿಗಳಿಗೆ ಸಾರಿಗೆ ಸಂಪರ್ಕ ಒದಗಿಸುವುದೇ ಸರ್ಕಾರದ ಉದ್ದೇಶ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಭರವಸೆ ನೀಡಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವು ಹಳ್ಳಿಗಳಿಗೆ ಸಾರಿಗೆ ಸಂಪರ್ಕ ಇಲ್ಲ ಎಂಬುದು ಮಾಧ್ಯಮದ ಮೂಲಕ ಗಮನಕ್ಕೆ ಬಂದಿದೆ. ವಿದ್ಯಾರ್ಥಿಗಳು ಶಾಲೆ–ಕಾಲೇಜುಗಳಿಗೆ ಕಾಲ್ನಡಿಗೆಯಲ್ಲೇ ಸಾಗಬೇಕಾದ ಸಂಕಷ್ಟ ಇರುವುದು ಗೊತ್ತಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚೆ ನಡೆಸಲಾಗಿದೆ. ಸಾರಿಗೆ ಸಂಪರ್ಕ ಕಲ್ಪಿಸಿ ಸಮಸ್ಯೆ ಪರಿಹರಿಸುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ ಎಂದು ಹೇಳಿದರು.
ಚಿತ್ರದುರ್ಗವೂ ಸೇರಿ ರಾಜ್ಯದ ಹಲವೆಡೆ ಖಾಸಗಿ ಬಸ್ ಹಾವಳಿ ಹೆಚ್ಚಾಗಿದೆ. ಲಾಭದಾಯ ಮಾರ್ಗಗಳನ್ನು ಖಾಸಗಿ ಬಸ್ಗಳು ಕಬಳಿಸಿವೆ. ಇದರಿಂದ ಸಾರಿಗೆ ನಿಗಮ ಸಂಕಷ್ಟಕ್ಕೆ ಸಿಲುಕಿವೆ. ಡೀಸೆಲ್ ಹೊರೆಯ ಕಾರಣಕ್ಕೆ ನಷ್ಟದ ಪ್ರಮಾಣ ಹೆಚ್ಚಾಗುತ್ತಿದೆ. ಸಿಎನ್ಜಿ ಇಂಧನ ಬಳಕೆ ಹೆಚ್ಚಿಸಿ ನಷ್ಟದ ಪ್ರಮಾಣವನ್ನು ತಪ್ಪಿಸಲು ಚರ್ಚಿಸಲಾಗಿದೆ ಎಂದು ತಿಳಿಸಿದರು.
‘












