ಕಟೀಲು ದೇವಳದ ಎದುರು ಹೊತ್ತಿ ಉರಿದ ಬಸ್: ಮೂವರು ಪ್ರಾಣಾಪಯದಿಂದ ಪಾರು

ಕಟೀಲು: ಇಲ್ಲಿನ ಪ್ರಸಿದ್ದ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಮುಂದೆ ಎಂಆರ್‌ಪಿಎಲ್ ಕಂಪನಿಗೆ ಸೇರಿದ ಬಸ್ ಒಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಏಕಾಏಕಿ ಹೊತ್ತಿ ಉರಿದಿದೆ. ಅದೃಷ್ಟವಶಾತ್ ಬಸ್ಸಿನಲ್ಲಿದ್ದ ಮೂವರು ಪವಾಡ ಸದೃಶ ರೀತಿಯಲ್ಲಿ ಪಾರಾಗಿರುವ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.

ಸುರತ್ಕಲ್ ಸಮೀಪದ ಓಎಂಪಿಎಲ್ ಗೆ ಸಿಬಂದಿಗಳನ್ನು ಕರೆದೊಯ್ಯುವ ಬಸ್ಸು ಮಧ್ಯಾಹ್ನ 2.45ರ ಸುಮಾರಿಗೆ ಕಟೀಲು ದೇವಸ್ಥಾನದ ಎದುರು ರಾಜ್ಯ ಹೆದ್ದಾರಿಯಲ್ಲಿ ನಿಲ್ಲಿಸಿದ್ದು ಶಾರ್ಟ್ ಸರ್ಕ್ಯೂಟ್ ನಿಂದ ಏಕಾಏಕಿ ಹೊತ್ತಿ ಉರಿದಿದೆ ಎನ್ನಲಾಗಿದೆ.

ಧಗಧಗಿಸುವ ಬೆಂಕಿ ಕಂಡು ಸ್ಥಳೀಯರು ಭಯಭೀತರಾಗಿದ್ದು , ಮೂರುಕಾವೇರಿ ಬಳಿಯ ವಿಶ್ವನಾಥ ಎಂಬುವವರ ನೀರಿನ ಟ್ಯಾಂಕರ್ ಮೂಲಕ ನೀರು ಹಾಯಿಸಿ ಕೂಡಲೇ ಬೆಂಕಿ ನಂದಿಸಲಾಗಿದೆ.

ಕಟೀಲು ರೂಟ್ ನಲ್ಲಿ ಚಲಿಸುವ ಓಎಂಪಿಎಲ್ ಕಂಪನಿಯ ಈ ಬಸ್ ಕಡೆಯ ನೌಕರರನ್ನು ಬಿಟ್ಟು ವಾಪಸ್ಸಾಗುವ ವೇಳೆ ಈ ಘಟನೆ ಸಂಭವಿಸಿದ್ದು, ಬಸ್ಸಿನಲ್ಲಿ ಡ್ರೈವರ್ ಸೇರಿ ಮೂರು ಜನ ಇದ್ದಾರೆಂದು ತಿಳಿದು ಬಂದಿದೆ. ಬೆಂಕಿ ತಗಲಿದ ಕೂಡಲೇ ಬಸ್ಸಿನಲ್ಲಿದ್ದ ಚಾಲಕ ಹಾಗೂ ಇನ್ನಿಬ್ಬರು ಬಸ್ಸಿನಿಂದ ಜಿಗಿದು ಪವಾಡ ಸದೃಶ ಪಾರಾಗಿದ್ದಾರೆ ಎನ್ನಲಾಗಿದೆ.