ಉತ್ತರಪ್ರದೇಶ: ಶುಕ್ರವಾರ ಜೂನ್ 10 ರಂದು ಉತ್ತರಪ್ರದೇಶಲ್ಲಿ ಭುಗಿಲೆದ್ದ ಪ್ರತಿಭಟನೆಯ ಹಿನ್ನಲೆಯಲ್ಲಿ, ಉತ್ತರಪ್ರದೇಶ ಸರಕಾರವು ದಂಡಂ ದಶಗುಣಂ ಭವೇತ್ ಎನ್ನುವ ನೀತಿಯನ್ನು ಅನುಸರಿಸಿದ್ದು, ಸಮಾಜದ ಶಾಂತಿ ಕದಡುವ ಸಮಾಜದ ಘಾತಕ ಶಕ್ತಿಗಳ ವಿರುದ್ದ ಸಮರ ಸಾರಿದೆ.
ಜೂನ್ 10 ರಂದು ಶುಕ್ರವಾರದ ಪ್ರಾರ್ಥನೆಯ ನಂತರ ನಡೆದ ಪ್ರತಿಭಟನೆಗಳ ನಡುವೆ ಕಲ್ಲು ತೂರಾಟ ಮತ್ತು ಬೆಂಕಿ ಹಚ್ಚಿದ ಜನರನ್ನು ಗುರುತಿಸಲು ಮತ್ತು ಬಂಧಿಸಲು ಏಕಕಾಲದಲ್ಲಿ ನಡೆಸಿದ ದಾಳಿಯಲ್ಲಿ ರಾಜ್ಯದ ಏಳು ಜಿಲ್ಲೆಗಳಿಂದ ಸುಮಾರು 230 ಜನರನ್ನು ಬಂಧಿಸಲಾಗಿದೆ.
ಹಿಂದಿನ ದಿನದ ಹಿಂಸಾಚಾರಕ್ಕೆ ಕಾರಣರಾದವರ ವಿರುದ್ಧ “ಕಠಿಣ” ಕ್ರಮ ಕೈಗೊಳ್ಳುವಂತೆ ಆದಿತ್ಯನಾಥ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. “ಬಡವರ ಮನೆಯ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳಲಾಗುವುದಿಲ್ಲ” ಆದರೆ ಬುಲ್ಡೋಜರ್‌ಗಳು “ಅಪರಾಧಿಗಳು ಮತ್ತು ಮಾಫಿಯಾ” ಗಳನ್ನು ಹತ್ತಿಕ್ಕುವುದನ್ನು ಮುಂದುವರಿಸುತ್ತವೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
“ಅನಿವಾರ್ಯ ಕಾರಣಗಳಿಂದಾಗಿ ಯಾವುದೇ ಬಡವರು ಅಥವಾ ಅಸಹಾಯಕರು ಮನೆಯನ್ನು ಸೂಕ್ತವಲ್ಲದ ಸ್ಥಳದಲ್ಲಿ ನಿರ್ಮಿಸಿದ್ದರೆ, ಮೊದಲು ಸ್ಥಳೀಯ ಆಡಳಿತದಿಂದ ಅವರಿಗೆ ಸೂಕ್ತ ವ್ಯವಸ್ಥೆ ಮಾಡಲಾಗುವುದು. ಸುಸಂಸ್ಕೃತ ಸಮಾಜದಲ್ಲಿ ಕಿಡಿಗೇಡಿಗಳಿಗೆ ಸ್ಥಾನವಿಲ್ಲ, ಜೊತೆಗೆ ರಾಷ್ಟ್ರದ “ವಾತಾವರಣವನ್ನು ಹಾಳುಮಾಡುವ” ಶಕ್ತಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಕಾನೂನು ಕ್ರಮಗಳನ್ನು ಪ್ರಾರಂಭಿಸಲಾಗುವುದು” ಎಂದು ಟ್ವೀಟ್ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಅದಾಗಲೇ ಬುಲ್ಡೋಜರ್ ಗಳು ತಮ್ಮ ಕೆಲಸ ಶುರು ಮಾಡಿದ್ದು, ಶನಿವಾರದಿಂದಲೇ ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡುವ ಕೆಲಸಗಳಲ್ಲಿ ನಿರತವಾಗಿವೆ. ಉ.ಪ್ರದೇಶದ ಕಾನ್ಪುರ ಮತ್ತು ಸಹಾರನ್ ಪುರ ಹಾಗೂ ಬಹುತೇಕ ಕಡೆಗಳಲ್ಲಿ ಶತ್ರು ಆಸ್ತಿಗಳ ಮೇಲೆ ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದು, ಮಟ್ಟುಗೋಲು ಹಾಕುವಿಕೆ ಕಾಯ್ದೆಯಡಿ ಇಂತಹ ಅಕ್ರಮ ಕಟ್ಟಡಗಳನ್ನು ಸರಕಾರ ಮುಟ್ಟುಗೋಲು ಹಾಕುವ ಅಧಿಕಾರ ಹೊಂದಿದೆ. ಭಾರತ-ಪಾಕಿಸ್ತಾನ ವಿಭಜನೆಯ ಸಂದರ್ಭದಲ್ಲಿ ಭಾರತದಿಂದ ಹೊರಹೋದವರ ಆಸ್ತಿಗಳು ದೇಶದಲ್ಲಿದ್ದರೆ, ಅಂತಹ ಆಸ್ತಿಗಳನ್ನು ಶತ್ರು ಆಸ್ತಿ(ಎನಿಮಿ ಪ್ರಾಪರ್ಟಿ) ಎಂದು ಪರಿಗಣಿಸಲಾಗುತ್ತದೆ ಮತ್ತು ಇವುಗಳನ್ನು ಮುಟ್ಟುಗೋಲು ಹಾಕುವ ಅಧಿಕಾರ ಆಯಾ ರಾಜ್ಯ ಸರಕಾರಗಳಿಗಿರುತ್ತದೆ.












