ಉಡುಪಿ: ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ನೂತನ ನಿಯಮವನ್ನು ವಿರೋಧಿಸಿ ಜಿಲ್ಲಾ ಕಟ್ಟಡ ಸಾಮಾಗ್ರಿ ಸಾಗಾಟ ವಾಹನಗಳ ಮಾಲಕರ ಒಕ್ಕೂಟವು ಅಕ್ಟೋಬರ್ 3 ರಂದು ಉಡುಪಿ ಜಿಲ್ಲಾ ಬಂದ್ ಗೆ ಕರೆ ನೀಡಿದ್ದನ್ನು ರಾಜ್ಯಪಾಲರ ಆಗಮನದ ಹಿನ್ನೆಲೆಯಲ್ಲಿ ಕೈಬಿಡಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಪರವಾನಗಿ ರಹಿತ ಕಟ್ಟಡ ಸಾಮಗ್ರಿ ಸಾಗಾಟ ವಾಹನಗಳನ್ನು ಪೊಲೀಸರು ಮುಟ್ಟುಗೋಲು ಹಾಕಿ ದಂಡ ವಿಧಿಸಿ ಪ್ರಕರಣ ದಾಖಲಿಸುತ್ತಿರುವುದನ್ನು ವಿರೋಧಿಸಿ, ಉಡುಪಿ ಜಿಲ್ಲಾ ಕಟ್ಟಡ ಸಾಮಗ್ರಿ ಸಾಗಾಟ ಲಾರಿ, ಟೆಂಪೋ ಮಾಲಕರ ಒಕ್ಕೂಟದ ನೇತೃತ್ವದಲ್ಲಿ ಉಡುಪಿ ಜಿಲ್ಲೆಯಾದ್ಯಂತ ಹಮ್ಮಿಕೊಂಡಿರುವ ಅನಿರ್ಧಿಷ್ಠಾವಧಿ ಮುಷ್ಕರವು ಮುಂದುವರೆದಿದೆ.
ಕಟ್ಟಡ ಸಾಮಾಗ್ರಿ ಸಾಗಾಟವನ್ನು ಸ್ಥಗಿತಗೊಳಿಸಿ ನೂರಾರು ಸಂಖ್ಯೆಯಲ್ಲಿ ಲಾರಿಗಳು ರಾಷ್ಟ್ರೀಯ ಹೆದ್ದಾರಿ ಬಳಿ ಸರತಿ ಸಾಲಿನಲ್ಲಿ ನಿಂತಿವೆ. ತಮ್ಮ ಬೇಡಿಕೆ ಈಡೇರದಿದ್ದರೆ ಅಕ್ಟೋಬರ್ 3ರಂದು ಉಡುಪಿ ಜಿಲ್ಲೆಯಾದ್ಯಂತ ಬಂದ್ ಗೆ ಕರೆ ನೀಡಲಾಗಿತ್ತು. ಆದರೆ ಜಿಲ್ಲೆಗೆ ರಾಜ್ಯಪಾಲರು ಆಗಮಿಸುವ ಹಿನ್ನೆಲೆಯಲ್ಲಿ ಮತ್ತು ಜನಸಾಮಾನ್ಯರಿಗೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಉಡುಪಿ ಜಿಲ್ಲೆ ಬಂದ್ ನಿರ್ಧಾರವನ್ನು ಕೈಬಿಡಲಾಗಿದೆ. ಆದರೆ ಮುಷ್ಕರ ಹಾಗೂ ಹೋರಾಟಗಳು ಮುಂದುವರೆಯಲಿದೆ ಎಂದು ಒಕ್ಕೂಟದ ಪ್ರಮುಖ ರಾಘವೇಂದ್ರ ಶೆಟ್ಟಿ ತಿಳಿಸಿದ್ದಾರೆ.