ಬಜೆಟ್‌ನ ಹೊಸ ದರ ನಾಳೆಯಿಂದ ಜಾರಿ-ಯಾವುದು ದುಬಾರಿ? ಯಾವುದು ಅಗ್ಗ?

ಈಗಾಗಲೇ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ.ಇದೇ ಶನಿವಾರದಿಂದ
(ಏಪ್ರಿಲ್‌ 1) ಹೊಸ ಹಣಕಾಸು ವರ್ಷ ಆರಂಭವಾಗಲಿದ್ದು, ಕೇಂದ್ರ ಬಜೆಟ್‌ನಲ್ಲಿ ಘೋಷಿಸಿದಂತೆ ಹಲವು ವಸ್ತುಗಳ ಬೆಲೆ ಏರಿಕೆಯಾಗಲಿದ್ದು, ಕೆಲವು ವಸ್ತುಗಳ ಬೆಲೆ ಇಳಿಕೆಯಾಗಲಿದೆ.

ಹೊಸ ಹಣಕಾಸು ವರ್ಷದ ಆರಂಭದೊಂದಿಗೆ ಹಲವು ಬದಲಾವಣೆಗಳು ಆಗಲಿವೆ. ಹಣದುಬ್ಬರದ ಹೊರೆ ಶ್ರೀಸಾಮಾನ್ಯನ ಮೇಲೆ ಹೆಚ್ಚಾಗಲಿದೆ. ಹೊಸ ಹಣಕಾಸು ವರ್ಷದ ಆರಂಭದೊಂದಿಗೆ ಹಲವು ವಸ್ತುಗಳು ದುಬಾರಿಯಾಗಲಿವೆ. ಇದು ನೇರವಾಗಿ ಜನಸಾಮಾನ್ಯರ ಜೇಬಿನ ಮೇಲೆ ಪರಿಣಾಮ ಬೀರಲಿದೆ. ವಾಸ್ತವದಲ್ಲಿ, ಫೆಬ್ರವರಿ 1 ರಂದು ಮಂಡಿಸಲಾದ ಸಾಮಾನ್ಯ ಬಜೆಟ್‌ನಲ್ಲಿ ಅನೇಕ ವಸ್ತುಗಳ ಮೇಲಿನ ತೆರಿಗೆ ಹೆಚ್ಚಳದಿಂದಾಗಿ, ಅವುಗಳ ಬೆಲೆ ಹೆಚ್ಚಾಗಬೇಕಾಗಿದೆ.

ಏಪ್ರಿಲ್ 1 ರಿಂದ ಕೆಲವು ವಸ್ತುಗಳ ಬೆಲೆ ಕಡಿಮೆಯಾಗಲಿದ್ದು, ಕೇಂದ್ರ ಸರ್ಕಾರ ಸುಂಕ ಮತ್ತು ತೆರಿಗೆ ಸ್ಲ್ಯಾಬ್‌ಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಆ ಪ್ರಕಾರ, ಬಟ್ಟೆ, ಆಟಿಕೆಗಳು, ಬೈಸಿಕಲ್‌, ಟಿವಿ, ವಜ್ರ, ಬಣ್ಣದ ಕಲ್ಲುಗಳು, ಮೊಬೈಲ್, ಮೊಬೈಲ್ ಚಾರ್ಜರ್‌ಗಳು, ಕ್ಯಾಮೆರಾ ಲೆನ್ಸ್‌ಗಳು, ಕಾಫಿ ಬೀಜಗಳು, ಭಾರತದಲ್ಲಿ ತಯಾರಿಸಿದ ಎಲೆಕ್ಟ್ರಾನಿಕ್ ವಾಹನಗಳು, ಲಿಥಿಯಂ ಐಯಾನ್ ಬ್ಯಾಟರಿಗಳು ಮತ್ತು ಪೆಟ್ರೋಲಿಯಂ ಉತ್ಪನ್ನಗಳಿಗೆ ಅಗತ್ಯವಿರುವ ಕೆಲವು ರಾಸಾಯನಿಕಗಳು, ವಜ್ರಗಳು ಮತ್ತು ಬಣ್ಣದ ಕಲ್ಲುಗಳು ಸೇರಿವೆ.

ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ ಬಿಗ್​ ಶಾಕ್​ ನೀಡಿದ್ದು, ಏಪ್ರಿಲ್​ 01 ರಿಂದ 800 ಔಷಧಗಳ ಬೆಲೆ ಏರಿಕೆ ಮಾಡುವುದಾಗಿ ತಿಳಿಸಿದೆ. ಸಾಮಾನ್ಯ ಬಳಕೆಯ ಔಷಧಗಳ ಬೆಲೆ ಶೇ.12ರಷ್ಟು ಏರಿಕೆಯಾಗಲಿದೆ. ನೋವು ನಿವಾರಕ, ಆ್ಯಂಟಿ ಬಯೋಟಿಕ್‌, ಉರಿಯೂತ ನಿವಾರಕ ಔಷಧಗಳು, ಹೃದ್ರೋಗ ಔಷಧ ಸೇರಿದಂತೆ 800 ಔಷಧಗಳ ಬೆಲೆ ಏರಿಕೆಯಾಗಲಿದೆ ಎಂದು ಪ್ರಾಧಿಕಾರ ತಿಳಿಸಿದೆ. ಕಳೆದ ವರ್ಷ ಏಪ್ರಿಲ್​ನಲ್ಲಿ ಶೇ.10.7ರಷ್ಟು ದರ ಏರಿಕೆಯಾಗಿತ್ತು. ಈ ವರ್ಷ ಶೇ.12ರಷ್ಟು ಏರಿಕೆ ಮಾಡಲು ನಿರ್ಧರಿಸಿದೆ.

ಇನ್ನುಳಿದಂತೆ, ಪ್ಲಾಸ್ಟಿಕ್‌ ನೀರಿನ ಬಾಟಲಿಗಳು, ಕಾರಿನ ಭಾಗಗಳು, ಔಷಧದ ಕವರ್‌ಗಳು, ಚಿನ್ನ, ಬೆಳ್ಳಿ, ಪ್ಲಾಟಿನಂ, ಸಿಗರೇಟ್‌, ವಿದೇಶಿ ಆಟಿಕೆಗಳು, ಕಿಚನ್ ಚಿಮಣಿಗಳು, ಕಾರುಗಳು, ಖಾಸಗಿ ಜೆಟ್‌ ಮತ್ತು ಹೆಲಿಕಾಪ್ಟರ್‌ ಬೆಲೆ ಏರಿಕೆಯಾಗಲಿದೆ.