ಸಾಲ ಮಾಡಿ ತುಪ್ಪ ತಿನ್ನು ಎನ್ನುವ ಬಜೆಟ್ : ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್

ಉಡುಪಿ: ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮಂಡಿಸಿದ 15ನೇ ಬಜೆಟ್ ಲೋಕಸಭಾ ಚುನಾವಣೆ ದೃಷ್ಟಿ ಇಟ್ಟುಕೊಂಡು ಎಲ್ಲರನ್ನೂ ತೃಪ್ತಿ ಪಡಿಸುತ್ತೇನೆ ಎಂಬ ಧ್ಯೇಯ ವಾಕ್ಯದೊಂದಿಗೆ ಸಾಲ ಮಾಡಿ ತುಪ್ಪ ತಿನ್ನು ಎಂಬಂತಿದೆ. 1 ಲಕ್ಷ 5 ಸಾವಿರ ಕೋಟಿ ಸಾಲ ಮಾಡಿ ಅದರಲ್ಲಿ 52 ಸಾವಿರ ಗ್ಯಾರಂಟಿಗಳಿಗೆ ಹಂಚಿ ಉಳಿದ ಮೊತ್ತವನ್ನು ಅವರ ಓಟು ಬ್ಯಾಂಕ್‌ಗಳಿಗೆ ಹಂಚಿ ತೃಪ್ತಿ ಪಡಿಸುವ ಪ್ರಯತ್ನ ಮಾಡಿದ್ದಾರೆ.

ಶಾಸಕರುಗಳಿಗೆ ಯಾವುದೇ ಅನುದಾನ ಕೊಡದೆ, ಪೊಳ್ಳು ಬಜೆಟ್ ಮಂಡಿಸಿದ್ದಾರೆ. ಇದರ ಪರಿಣಾಮ ಮುಂದಿನ ದಿನಗಳಲ್ಲಿ ರಾಜ್ಯದ ಜನ ಅನುಭವಿಸಬೇಕಾಗುತ್ತದೆ. ನಮ್ಮ ಜಿಲ್ಲೆಗೆ ಯಾವುದೇ ಅಭಿವೃದ್ಧಿ ಯೋಜನೆ ಇಲ್ಲ. ಇದು ಅಭಿವೃದ್ಧಿ ಮಾಡುವ ಬಜೆಟ್ ಅಲ್ಲ ಖರ್ಚು ಮಾಡುವ ಬಜೆಟ್ ಆಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.