ಬಿ.ಎಸ್. ಯಡಿಯೂರಪ್ಪ ಇಂದೇ ಪ್ರಮಾಣವಚನ ಸ್ವೀಕಾರ

ಬೆಂಗಳೂರು: ಹಲವು ದಿನಗಳ ರಾಜಕೀಯ ಕೋಲಹಲಗಳ ಅನಂತರ ಬಿಜೆಪಿಗೆ ಆಡಳಿತ ನಡೆಸುವ ಅವಕಾಶ ದೊರೆತಿದ್ದು, ಹೀಗಾಗಿ  ಬಿ.ಎಸ್.ಯಡಿಯೂರಪ್ಪ ಶುಕ್ರವಾರವೇ ರಾಜ್ಯದ ಮುಖ್ಯಮಂತ್ರಿಯಾಗಿ 4ನೇ ಬಾರಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆ ಮಾಡಲು ಅವಕಾಶ ನೀಡಲು ಮನವಿ ಮಾಡಿದ್ದಾರೆ. ತಮ್ಮದು ಸಿಂಗಲ್ ಲಾರ್ಜೆಸ್ಟ್ ಪಕ್ಷ ಎಂದು ಹಕ್ಕು ಮಂಡಿಸಿದ್ದಾರೆ.
ಕೇಂದ್ರಕ್ಕೆ ತೆರಳಿದ್ದ BJP ನಿಯೋಗಕ್ಕೆ ಬಿಜೆಪಿ ಹೈ ಕಮಾಂಡ್ ಗ್ರೀನ್ ಸಿಗ್ನಲ್ ನೀಡಿದ್ದು, ಸಂಜೆ 6.15ರ ಒಳಗೆ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ 15 ಶಾಸಕರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಸರಕಾರ ಅತಂತ್ರವಾಗಿ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಹುಮತ ಸಾಬೀತುಪಡಿಸುವಲ್ಲಿ ವಿಫಲರಾದರು. ಈ ಬೆನ್ನಲ್ಲೇ 2018ರ ವಿಧಾನಸಭಾ ಚುನಾವಣೆಯಲ್ಲಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ ಸರಕಾರ ರಚಿಸಲು ಮುಂದಾಗಿದೆ.
ಕಳೆದ ವಿಧಾನಸಭಾ ಚುನಾವಣೆ ಮುಗಿದಾಗಲೂ ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆದರೆ ಸರಕಾರ ರಚಿಸಲು 112 ಮ್ಯಾಜಿಕ್ ನಂಬರ್ ಆಗಿದ್ದು, ಬಿಜೆಪಿ ಕೇವಲ 104 ಸ್ಥಾನಗಳನ್ನು ಪಡೆದಿತ್ತು. ಆದ್ದರಿಂದ ವಿಶ್ವಾಸ ಮತವನ್ನೇ ಯಾಚಿಸದೇ ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅನಂತರ ಮೈತ್ರಿ‌ ಸರಕಾರ 14 ತಿಂಗಳ ಕಾಲ ಯಾವುದೇ ಅಡೆ ತಡೆ ಇಲ್ಲದೇ ಮುಂದುವರಿದಿತ್ತು. ಯಾವಾಗ ಕೆಲವು ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಬಂಡಾಯವೆದ್ದರೋ, ರಾಜ್ಯದಲ್ಲಿ ಮತ್ತೆ ರಾಜಕೀಯ ಆಟ ಆರಂಭವಾಯಿತು. ಹೀಗಾಗಿ ಬಿಜೆಪಿ ರಾಜ್ಯದಲ್ಲಿ ಮತ್ತೊಮ್ಮೆ ಆಡಳಿತ ನಡೆಸುವಂತಾಗಿದೆ.