ಶೀಘ್ರದಲ್ಲೇ ಚಂದನ ವಾಹಿನಿಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ‘ಸೇತುಬಂಧ’ ತರಗತಿಗಳ‌ ಪ್ರಸಾರ: ಸಚಿವ ಸುರೇಶ್ ಕುಮಾರ್

ಬೆಂಗಳೂರು: ಕೊರೊನಾ ಸೋಂಕು ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೆ ಶಾಲಾಗಳು ಆರಂಭಗೊಳ್ಳುವ ಸಾಧ್ಯತೆ ಕಡಿಮೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ 8, 9 ಮತ್ತು 10ನೇ ತರಗತಿಗಳಿಗಾಗಿ ‘ಸೇತುಬಂಧ’ ಕಾರ್ಯಕ್ರಮಗಳ ವಿಡಿಯೊ ತರಗತಿಗಳನ್ನು ಸರ್ಕಾರ ಶೀಘ್ರದಲ್ಲಿಯೇ ದೂರದರ್ಶನ ಚಂದನವಾಹಿನಿಯಲ್ಲಿ ಪ್ರಸಾರ ಮಾಡಲಿದ್ದು, ಇದಕ್ಕೆ ಸಂಬಂಧಿಸಿದ ಅಗತ್ಯ ಪೂರ್ವ ಸಿದ್ಧತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ಇಂದು ಇಲಾಖೆಯ ರಾಜ್ಯ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯ-ಡಿಎಸ್ಇಆರ್ಟಿಯಲ್ಲಿ ಸೇತುಬಂಧ ಕಾರ್ಯಕ್ರಮದ ರೂಪುರೇಷೆ ಮತ್ತು ಸಿದ್ಧತೆಗಳನ್ನು ಅವರು ಪರಿಶೀಲಿಸಿದರು.
ಇಲಾಖೆ ಸಿದ್ಧಪಡಿಸಿದ ವಿಡಿಯೊ ತರಗತಿಗಳನ್ನು ವೀಕ್ಷಿಸಿದರು. ಒಂದು ತರಗತಿಯಿಂದ ಮತ್ತೊಂದು ತರಗತಿಗೆ ತೇರ್ಗಡೆ ಹೊಂದುವ ಮಕ್ಕಳಿಗೆ ಹಿಂದಿನ ತರಗತಿಗಳ ಕಲಿಕೆಯನ್ನು ನೆನಪಿಸಿ ಮುಂದಿನ ತರಗತಿಗಳಿಗೆ ಸಿದ್ಧಗೊಳಿಸುವ ‘ಸೇತುಬಂಧ’ ಮಕ್ಕಳ ಕಲಿಕೆಯನ್ನು ಸಮಗ್ರವಾಗಿಸುವ ನಿಟ್ಟಿನಲ್ಲಿ ಒಂದು ಪರಿಪೂರ್ಣ ಕಾರ್ಯಕ್ರಮವಾಗಿದೆ ಎಂದರು.
ಶೀಘ್ರದಲ್ಲಿಯೇ 8ರಿಂದ 10ನೇ ತರಗತಿಯ ಸೇತುಬಂದ ವಿಡಿಯೊ ತರಗತಿಗಳು ಚಂದನ ವಾಹಿನಿಯಲ್ಲಿ ಆರಂಭಗೊಳ್ಳಲಿವೆ. ಆ ನಂತರ ಇಂಗ್ಲಿಷ್ ಮಾಧ್ಯಮಗಳಲ್ಲೂ ಈ ತರಗತಿಗಳ ಪಾಠಗಳನ್ನು ಆರಂಭಿಸಲಾಗುವುದು ಎಂದು ಸಚಿವರು ತಿಳಿಸಿದರು.
ಪ್ರತ್ಯೇಕ ಚಾನೆಲ್ ಆರಂಭಿಸಲು ಚಿಂತನೆ: 
ಶಿಕ್ಷಣ ಇಲಾಖೆಯಿಂದ ಒಂದು ಪ್ರತ್ಯೇಕ ಚಾನಲ್ ಪ್ರಾರಂಭಕ್ಕೂ ಪ್ರಯತ್ನಗಳು ನಡೆದಿದ್ದು, ರಾಜ್ಯದ ಆಯ್ದ ಸ್ಥಳಗಳಲ್ಲಿ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಹೊಸ ಸ್ಟುಡಿಯೋಗಳ ನಿರ್ಮಾಣಕ್ಕೆ ಈಗಾಗಲೇ ಅನುಮೋದನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಅವುಗಳು ಸಹ ಆರಂಭವಾಗಲಿವೆ ಎಂದು ಅವರು ಮಾಹಿತಿ ನೀಡಿದರು.