ದೇಶದಲ್ಲಿ ಬ್ರಾಡ್‌ಬ್ಯಾಂಡ್‌ ಕ್ರಾಂತಿ,101.21 ಮಿಲಿಯನ್‌ಗೆ ಏರಿದ ಚಂದಾದಾರರು! ಇಲ್ಲಿದೆ ಅಚ್ಚರಿಯ ಸಂಗತಿ

ನವದೆಹಲಿ: ಭಾರತದಲ್ಲಿ ಬ್ರಾಡ್‌ಬ್ಯಾಂಡ್‌ ಚಂದಾದಾರರ ಸಂಖ್ಯೆ ಆಗಸ್ಟ್‌ 2026ರ ಅಂತ್ಯಕ್ಕೆ 1,101.21 ಮಿಲಿಯನ್‌ಗೆ ಏರಿಕೆಯಾಗಿದೆ. ಜುಲೈ ಅಂತ್ಯದಲ್ಲಿ 1,094.48 ಮಿಲಿಯನ್ ಇದ್ದ ಚಂದಾದಾರರ ಸಂಖ್ಯೆ ಆಗಸ್ಟ್‌ನಲ್ಲಿ 6.73 ಮಿಲಿಯನ್‌ನಷ್ಟು ಹೆಚ್ಚಾಗಿದೆ. ಇದರೊಂದಿಗೆ ಮಾಸಿಕ ಬೆಳವಣಿಗೆ ದರ ಶೇ.0.61ರಷ್ಟಿದೆ ಎಂದು ಸರ್ಕಾರದ ಅಂಕಿಅಂಶಗಳು ತಿಳಿಸಿವೆ.

15.83 ಮಿಲಿಯನ್ MNP ಮನವಿ

ಆಗಸ್ಟ್‌ನಲ್ಲಿ 15.83 ಮಿಲಿಯನ್ ಚಂದಾದಾರರು ಮೊಬೈಲ್ ನಂಬರ್ ಪೋರ್ಟೆಬಿಲಿಟಿ (MNP)ಗಾಗಿ ಮನವಿ ಸಲ್ಲಿಸಿದ್ದಾರೆ. ಇದೇ ಅವಧಿಯಲ್ಲಿ ಸಕ್ರಿಯ ವೈರ್‌ಲೆಸ್‌ ಚಂದಾದಾರರ ಸಂಖ್ಯೆ (VLR) 1,207.59 ಮಿಲಿಯನ್‌ಗೆ ತಲುಪಿದೆ ಎಂದು ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (TRAI) ಅಂಕಿಅಂಶಗಳು ತಿಳಿಸಿವೆ.

ವೈರ್‌ಲೈನ್‌ ಚಂದಾದಾರರ ಸಂಖ್ಯೆಯಲ್ಲೂ ಏರಿಕೆ

ವೈರ್‌ಲೈನ್‌ ಚಂದಾದಾರರ ಸಂಖ್ಯೆಯಲ್ಲೂ ಹೆಚ್ಚಳ ಕಂಡುಬಂದಿದೆ. ಜುಲೈ 2026ರ ಅಂತ್ಯದಲ್ಲಿ 48.01 ಮಿಲಿಯನ್ ಇದ್ದ ವೈರ್‌ಲೈನ್‌ ಚಂದಾದಾರರ ಸಂಖ್ಯೆ ಆಗಸ್ಟ್‌ ಅಂತ್ಯಕ್ಕೆ 48.45 ಮಿಲಿಯನ್‌ಗೆ ಏರಿಕೆಯಾಗಿದೆ. ಇದರಿಂದ 0.44 ಮಿಲಿಯನ್‌ನಷ್ಟು ನಿವ್ವಳ ಹೆಚ್ಚಳವಾಗಿದ್ದು, ಮಾಸಿಕ ಬೆಳವಣಿಗೆ ದರ ಶೇ.0.93ರಷ್ಟಿದೆ.

ಭಾರತದ ಒಟ್ಟಾರೆ ವೈರ್‌ಲೈನ್‌ ಟೆಲಿ-ಡೆನ್ಸಿಟಿ ಜುಲೈ ಅಂತ್ಯದಲ್ಲಿ ಶೇ.3.36ರಷ್ಟಿದ್ದರೆ, ಆಗಸ್ಟ್‌ ಅಂತ್ಯಕ್ಕೆ ಶೇ.3.39ಕ್ಕೆ ಏರಿಕೆಯಾಗಿದೆ. ಆಗಸ್ಟ್‌ ಅಂತ್ಯದಲ್ಲಿ ನಗರ ಪ್ರದೇಶಗಳ ವೈರ್‌ಲೈನ್‌ ಟೆಲಿ-ಡೆನ್ಸಿಟಿ ಶೇ.8.34 ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಶೇ.0.58ರಷ್ಟಿತ್ತು.

ಒಟ್ಟು ವೈರ್‌ಲೈನ್‌ ಚಂದಾದಾರರಲ್ಲಿ ನಗರ ಪ್ರದೇಶದ ಚಂದಾದಾರರ ಪಾಲು ಶೇ.89.08 ಹಾಗೂ ಗ್ರಾಮೀಣ ಪ್ರದೇಶದ ಚಂದಾದಾರರ ಪಾಲು ಶೇ.10.92ರಷ್ಟಿದೆ. ಸರ್ಕಾರಿ ಸ್ವಾಮ್ಯದ ಸೇವಾ ಪೂರೈಕೆದಾರರಾದ BSNL, MTNL ಮತ್ತು APSFL ಒಟ್ಟಾಗಿ ಆಗಸ್ಟ್‌ ಅಂತ್ಯಕ್ಕೆ ವೈರ್‌ಲೈನ್‌ ಮಾರುಕಟ್ಟೆಯ ಶೇ.16.05ರಷ್ಟು ಪಾಲು ಹೊಂದಿವೆ.

ಡಿಜಿಟಲ್ ಕನೆಕ್ಟಿವಿಟಿ ರೇಟಿಂಗ್‌ ಪ್ಲಾಟ್‌ಫಾರ್ಮ್

TRAI ಇತ್ತೀಚೆಗೆ ಡಿಜಿಟಲ್ ಕನೆಕ್ಟಿವಿಟಿ ರೇಟಿಂಗ್‌ (DCR) ಪ್ಲಾಟ್‌ಫಾರ್ಮ್‌ ಅನ್ನು ಆರಂಭಿಸಿದೆ. ಡಿಜಿಟಲ್ ಕನೆಕ್ಟಿವಿಟಿ ಆಧಾರದ ಮೇಲೆ ಆಸ್ತಿಗಳ ರೇಟಿಂಗ್‌ ವೀಕ್ಷಿಸಲು ಗ್ರಾಹಕರಿಗೆ ಈ ಪ್ಲಾಟ್‌ಫಾರ್ಮ್‌ ಅವಕಾಶ ನೀಡುತ್ತದೆ. ಆಸ್ತಿಗಳ ಡಿಜಿಟಲ್ ಕನೆಕ್ಟಿವಿಟಿಯನ್ನು ಪರಿಶೀಲಿಸಿ ರೇಟ್‌ ಮಾಡುವ ಎಂಡ್‌-ಟು-ಎಂಡ್‌ ಪ್ರಕ್ರಿಯೆಯನ್ನೂ ಇದು ಸುಗಮಗೊಳಿಸುತ್ತದೆ. ಡಿಜಿಟಲ್ ಕನೆಕ್ಟಿವಿಟಿ ಪರೀಕ್ಷಿಸಲು ಮೊಬೈಲ್‌ ಆಪ್‌ ಕೂಡ ಲಭ್ಯವಿದೆ.

ಈ ಪ್ಲಾಟ್‌ಫಾರ್ಮ್‌ ಮೂಲಕ ಗ್ರಾಹಕರು ಡಿಜಿಟಲ್ ಕನೆಕ್ಟಿವಿಟಿಗಾಗಿ ರೇಟ್‌ ಮಾಡಲಾದ ಮನೆಗಳು ಮತ್ತು ಕಚೇರಿಗಳ ಮಾಹಿತಿಯನ್ನು ವೀಕ್ಷಿಸಬಹುದು. ರೇಟಿಂಗ್‌ಗಳನ್ನು ಸಾರ್ವಜನಿಕವಾಗಿ ಹುಡುಕಲು ಹಾಗೂ ಪ್ರಮಾಣಪತ್ರಗಳನ್ನು ಪರಿಶೀಲಿಸಲು ಅವಕಾಶ ನೀಡುವ ಮೂಲಕ ಗ್ರಾಹಕರಿಗೆ ವಿಶ್ವಾಸಾರ್ಹ ಮತ್ತು ಹೋಲಿಕೆ ಮಾಡಬಹುದಾದ ಮಾಹಿತಿಯನ್ನು ಒದಗಿಸುವುದು ಇದರ ಉದ್ದೇಶವಾಗಿದೆ.

ಇದರಿಂದ ಉತ್ತಮ ಕನೆಕ್ಟಿವಿಟಿ ಹೊಂದಿರುವ ಮನೆ ಅಥವಾ ಕಚೇರಿಯನ್ನು ಆಯ್ಕೆ ಮಾಡುವಾಗ ಗ್ರಾಹಕರಿಗೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ಸುಗಮ ಕರೆಗಳು, ವೇಗದ ಡೌನ್‌ಲೋಡ್‌ಗಳು ಹಾಗೂ ಆನ್‌ಲೈನ್‌ ಸೇವೆಗಳ ಬಳಕೆಗೆ ಅಗತ್ಯವಾದ ಡಿಜಿಟಲ್‌ ಕನೆಕ್ಟಿವಿಟಿ ಕುರಿತು ಮಾಹಿತಿ ಪಡೆಯಲು ಇದು ಸಹಕಾರಿಯಾಗಲಿದೆ ಎಂದು TRAI ಅಧ್ಯಕ್ಷ ಅನಿಲ್‌ ಕುಮಾರ್‌ ಲಹೋಟಿ ತಿಳಿಸಿದ್ದಾರೆ.