ದೆಹರಾದೂನ್: ಉತ್ತರಾಖಂಡದ ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರನ್ನು ತಲುಪಲು ಪೈಪ್ ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ.
ಸಿಲ್ಕ್ಯಾರಾ ಸುರಂಗದ ಅವಶೇಷಗಳೊಳಗೆ ಸಿಲುಕಿರುವ 41 ಕಾರ್ಮಿಕರನ್ನು ತಲುಪಲು “ರ್ಯಾಟ್-ಹೋಲ್ ಗಣಿಗಾರರ” ವಿಶೇಷ ತಂಡವು ನಿನ್ನೆ ಹಸ್ತಚಾಲಿತ ಕೊರೆಯುವ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.
ಯಾವುದೇ ಅಡೆತಡೆಗಳಿಲ್ಲದಿದ್ದರೆ, ಸಿಕ್ಕಿಬಿದ್ದ ಕಾರ್ಮಿಕರನ್ನು ಶೀಘ್ರವಾಗಿ ಸ್ಥಳಾಂತರಿಸುವ ನಿರೀಕ್ಷೆಯಿದೆ ಎಂದು ಸಿಲ್ಕ್ಯಾರಾ ರಕ್ಷಣಾ ಕಾರ್ಯಾಚರಣೆಯ ನೋಡಲ್ ಅಧಿಕಾರಿ ಮತ್ತು ಉತ್ತರಾಖಂಡ ಸರ್ಕಾರದ ಕಾರ್ಯದರ್ಶಿ ನೀರಜ್ ಖೈರ್ವಾಲ್ ತಿಳಿಸಿದ್ದಾರೆ.
ಕಳೆದ 17 ದಿನಗಳಿಂದ ಕಾರ್ಮಿಕರು ಸುರಂಗದೊಳಗೆ ಸಿಲುಕಿದ್ದು ಬೃಹತ್ ಯಂತ್ರಗಳ ಸಹಾಯದಿಂದ ಸುರಂಗವನ್ನು ಕೊರೆದು ಕಾರ್ಮಿಕರನ್ನು ಹೊರತರುವ ಪ್ರಯತ್ನ ಸಮರೋಪಾದಿಯಂತೆ ನಡೆಯುತ್ತಿದೆ. ಏತನ್ಮಧ್ಯೆ ಸುರಂಗ ಕೊರೆಯುವ ಯಂತ್ರವು ಲೋಹದ ವಸ್ತುವಿಗೆ ಬಡಿದು ಯಂತ್ರಕ್ಕೆ ಹಾನಿಯಾಗಿದ್ದರಿಂದ ಕಾರ್ಯಾಚರಣೆಯನ್ನು ರ್ಯಾಟ್ ಹೋಲ್ ಮೈನರ್ಸ್ ಹೆಗಲಿಗೇರಿಸಲಾಗಿತ್ತು. ಇವರು ಸಾಂಪ್ರದಾಯಿಕವಾಗಿ ಹಸ್ತಚಾಲಿತ ಯಂತ್ರಗಳಿಂದ ಗಣಿ ಕೊರೆಯುವ ವಿಶೇಷಜ್ಞರಾಗಿದ್ದು, ಸುರಂಗವನ್ನು ಕೊರೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಎನ್.ಡಿ ಆರ್.ಎಫ್ ತಂಡವು ಸುರಂಗದೊಳಗೆ ಪ್ರವೇಶಿದೆ. ಘಟನಾ ಸ್ಥಳದಲ್ಲಿ ಆಂಬ್ಯುಲೆನ್ಸ್ ಗಳು ಹಾಗೂ ವೈದರು ಹಾಜರಿದ್ದು ಕಾರಮಿಕರನ್ನು ನೇರವಾಗಿ ಆಸ್ಪತ್ರೆಗೆ ಸಾಗಿಸಲಾಗುವುದು. ಕಾರ್ಮಿಕರ ಶುಶ್ರೂಷೆಗಾಗಿ ಆಸ್ಪತ್ರೆಯಲ್ಲಿ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ.
ಕಾರ್ಮಿಕರನ್ನು ಸುರಕ್ಷಿತವಾಗಿ ಹೊರ ತರಲು ಇನ್ನೂ ಕೆಲವು ಗಂಟೆ ತಗಲುವ ನಿರೀಕ್ಷೆ ಇದೆ.