ಬ್ರೆಜಿಲ್​ ಅಧ್ಯಕ್ಷ : ‘ಆರ್​ಆರ್​ಆರ್​ ನನ್ನ ಮೆಚ್ಚಿನ ಚಿತ್ರ’ 

ಇದೀಗ ಬ್ರೇಜಿಲ್​ ಅಧ್ಯಕ್ಷ ಲೂಯಿಜ್​​ ಇನಾಸಿಯೋ ಲುಲಾ ಡಾ ಸಿಲ್ವಾ (Luiz Inácio Lula da Silva) ಸಿನಿಮಾ ಕುರಿತು ಮಾತನಾಡಿದ್ದಾರೆ. ನವದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಂಭೆ​ಯಲ್ಲಿ ಭಾಗಿಯಾಗಿರುವ ಬ್ರೆಜಿಲ್​​ ಅಧ್ಯಕ್ಷರು ಆರ್​ಆರ್​ಆರ್​ ವಿಷಯ ಪ್ರಸ್ತಾಪಿಸಿದ್ದಾರೆ. ಇದು ನನ್ನ ಮೆಚ್ಚಿನ ಭಾರತೀಯ ಸಿನಿಮಾ. ಚಿತ್ರ ಅದ್ಭುತವಾಗಿದೆ ಎಂದು ಚಿತ್ರತಂಡವನ್ನು ಶ್ಲಾಘಿಸಿದ್ದಾರೆ.

ಸಿನಿ ಗಣ್ಯರು ಮಾತ್ರವಲ್ಲದೇ ಕ್ರೀಡಾಪಟುಗಳು, ರಾಜಕಾರಣಿಗಳೂ ಸೇರಿದಂತೆ ವಿಭಿನ್ನ ಕ್ಷೇತ್ರಗಳ ಗಣ್ಯರು ಆರ್​ಆರ್​ಆರ್ ಬಗ್ಗೆ ಮೆಚ್ಚುಗೆಯ ಸುರಿಮಳೆಗೈದಿದ್ದಾರೆ. ‘RRR’…ವಿಶೇಷ ಪರಿಚಯ ಬೇಕಿಲ್ಲ. ಭಾರತ ಮಾತ್ರವಲ್ಲದೇ ಜಾಗತಿಕ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸಿದ ಸಿನಿಮಾ. ವಿಶ್ವದಾದ್ಯಂತ ಅನೇಕ ಗಣ್ಯರು ಈ ಸಿನಿಮಾ ಕುರಿತು ಪ್ರಶಂಸೆ ವ್ಯಕ್ತಪಡಿಸಿದ್ದಾರೆಆರ್​ಆರ್​ಆರ್​ ಸಿನಿಮಾ ಬಗ್ಗೆ ಬ್ರೇಜಿಲ್​ ಅಧ್ಯಕ್ಷ ಲೂಯಿಜ್​​ ಇನಾಸಿಯೋ ಲುಲಾ ಡಾ ಸಿಲ್ವಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
.
”ನನಗೆ ಆರ್​ಆರ್​ಆರ್​ ಸಿನಿಮಾ ಬಹಳ ಇಷ್ಟವಾಯಿತು. ಇದು 3 ಗಂಟೆಯ ವಿಶಿಷ್ಟ ಸಿನಿಮಾ. ಸಿನಿಮಾದಲ್ಲಿ ಮನರಂಜನೆ, ಸಾಹಸ ಸನ್ನಿವೇಶಗಳು, ಡ್ಯಾನ್ಸ್​ ಎಲ್ಲವೂ ಬಹಳ ಚೆನ್ನಾಗಿದೆ. ಭಾರತದ ಮೇಲಿನ ಬ್ರಿಟಿಷರ ಪ್ರಾಬಲ್ಯವನ್ನು ಅರ್ಥಪೂರ್ಣವಾಗಿ ತೋರಿಸಲಾಗಿದೆ. ಸಿನಿಮಾ ವೀಕ್ಷಿಸಿದ ಬಳಿಕ ನಾನು ಯಾರೊಂದಿಗಾದರು ಮಾತನಾಡುವ ವೇಳೆ, ನಾನು ಮೊದಲು ಕೇಳುವ ಪ್ರಶ್ನೆ ‘ನೀವು ಆರ್​ಆರ್​ಆರ್​ ಸಿನಿಮಾ ವೀಕ್ಷಿಸಿದ್ದೀರಾ?’. ಈ ಸಿನಿಮಾವನ್ನು ನಿಜವಾಗಿಯೂ ಎಂಜಾಯ್​ ಮಾಡಿದ್ದೇನೆ. ಚಿತ್ರತಂಡಕ್ಕೆ ಧನ್ಯವಾದಗಳು” ಎಂದು ತಿಳಿಸಿದರು.

ಆರ್​ಆರ್​ಆರ್​: ದಕ್ಷಿಣ ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್​ಎಸ್​​ ರಾಜಮೌಳಿ ಅವರು ಕಾಲ್ಪನಿಕ ಕಥೆಯನ್ನು ಅದ್ಧೂರಿಯಾಗಿ ತೆರೆ ಮೇಲೆ ತಂದಿದ್ದಾರೆ. ಕೋಮುರಂ ಭೀಮನ ಪಾತ್ರದಲ್ಲಿ ಜೂನಿಯರ್​ ಎನ್​ಟಿಆರ್​, ಅಲ್ಲೂರಿ ಸೀತಾರಾಮ ರಾಜುನಾಗಿ ರಾಮ್​ ಚರಣ್​ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಉಳಿದಂತೆ ಪ್ರಮುಖ ಪಾತ್ರಗಳಲ್ಲಿ ಆಲಿಯಾ ಭಟ್​, ಅಜಯ್​ ದೇವ್​​ಗನ್​ ನಟಿಸಿದ್ದಾರೆ.

ಬಹುನಿರೀಕ್ಷೆಯೊಂದಿಗೆ 2022ರ ಮಾರ್ಚ್​​ 24ರಂದು ತೆರೆಕಂಡಿದ್ದ ಈ ಸಿನಿಮಾ ಪ್ರೇಕ್ಷಕರನ್ನು ಸೆಳೆಯುವಲ್ಲಿ ಅಭೂತಪೂರ್ವ ಯಶಸ್ಸು ಕಂಡಿತು. ದೇಶ ಮಾತ್ರವಲ್ಲದೇ ವಿಶ್ವದಾದ್ಯಂತ ಸಖತ್​ ಸದ್ದು ಮಾಡಿತು. ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ 1,000 ಕೋಟಿ ರೂ. ಕಲೆಕ್ಷನ್​ ಮಾಡಿದೆ ಎಂದು ವ್ಯಾಪಾರ ಮೂಲಗಳು ತಿಳಿಸಿವೆ. ಸೂಪರ್​ ಹಿಟ್​ ನಾಟು ನಾಟು ಹಾಡು ವಿಶ್ವ ಪ್ರತಿಷ್ಠಿತ ಆಸ್ಕರ್​ ಅನ್ನು ಮುಡುಗೇರಿಸಿಕೊಂಡಿದೆ. ಅಲ್ಲದೇ ಅನೇಕ ಅಂತಾರಾಷ್ಟ್ರೀಯ ಪ್ರಶಸ್ತಿ ಗೌರವಕ್ಕೆ ಸಿನಿಮಾ ಪಾತ್ರವಾಗಿದೆ.

ಬ್ರೆಜಿಲ್​ ಅಧ್ಯಕ್ಷ ವಿಡಿಯೋವನ್ನು ಆರ್​ಆರ್​ಆರ್​ ನಿರ್ದೇಶಕ ರಾಜಮೌಳಿ ಅವರು ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್ X (ಹಿಂದಿನ ಟ್ವಿಟರ್​) ನಲ್ಲಿ ಶೇರ್ ಮಾಡಿ ಧನ್ಯವಾದ ಅರ್ಪಿಸಿದ್ದಾರೆ. ”ಬಹಳ ಧನ್ಯವಾದಗಳು. ನೀವು ಭಾರತೀಯ ಸಿನಿಮಾವನ್ನು ಉಲ್ಲೇಖಿಸಿದ್ದೀರಿ, ಆರ್​ಆರ್​ಆರ್​ ಅನ್ನು ಆನಂದಿಸಿದ್ದೀರಿ ಎಂಬುದನ್ನು ತಿಳಿದು ಬಹಳ ಖುಷಿಯಾಯಿತು. ನಮ್ಮ ಚಿತ್ರತಂಡ ಭಾವಪರವಶವಾಗಿದೆ. ನಮ್ಮ ದೇಶದಲ್ಲಿ ನೀವು ಉತ್ತಮ ಸಮಯ ಹೊಂದಿದ್ದೀರೆಂದು ಭಾವಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ. ಆರ್​ಆರ್​ಆರ್​ ಅಧಿಕೃತ ಟ್ವಿಟರ್​ ಖಾತೆ ಕೂಡ ಈ ಟ್ವೀಟ್​ ಹಂಚಿಕೊಂಡು, ಧನ್ಯವಾದ ತಿಳಿಸಿದೆ. ನಿಮ್ಮ ಮಾತುಗಳಿಂದ ನಮ್ಮ ಇಡೀ ತಂಡ ಸಂತಸಗೊಂಡಿದೆ ಎಂದು ಹೇಳಿದೆ.