ಜ.20; ಬ್ರಹ್ಮಾವರದಲ್ಲಿ ರಾಷ್ಟ್ರ ಮಟ್ಟದ ಮ್ಯಾರಥಾನ್ ಸ್ಪರ್ಧೆ

ಬ್ರಹ್ಮಾವರ: ಎಕ್ತಾ ಇವೆಂಟ್ ಮ್ಯಾನೇಜ್ಮೆಂಟ್ ಹಾಗೂ ಕಲ್ಯಾಣಿ ಸ್ಪೋಟ್ಸ್  ಸಂಯುಕ್ತ ಆಶ್ರಯದಲ್ಲಿ ಜ.20ರಂದು ಆರೋಗ್ಯದ ಬಗ್ಗೆ ಜನ ಜಾಗೃತಿ ಮೂಡಿಸುವ ಸಲುವಾಗಿ ಬ್ರಹ್ಮಾವರದಲ್ಲಿ ರಾಷ್ಟ್ರ ಮಟ್ಟದ ಮ್ಯಾರಥಾನ್ ಕಾರ್ಯಕ್ರಮ ನಡೆಯಲಿದೆ. ಈ ಮ್ಯಾರಥಾನ್  ಕಮಿಟಿಯ ಗೌರವಾಧ್ಯಕ್ಷರು ಆಗಿರುವ  ಅಮೃತ್ ಶೆಣೈಯವರು  ಸಂಪೂರ್ಣ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಖಲೀಲ್ ಕೆರಾಡಿ ಬ್ರಹ್ಮಾವರದಲ್ಲಿ ನಡೆದ ಪ್ರತಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ಮ್ಯಾರಥಾನ್‍ನಲ್ಲಿ ಭಾಗವಹಿಸಲು ಎಲ್ಲರಿಗೂ ಮುಕ್ತ ಅವಕಾಶವಿದ್ದು, ಸ್ಥಳದಲ್ಲೇ ನೋಂದಣಿಗೆ ಅವಕಾಶವಿದೆ ಹಾಗೂ ಸ್ಪರ್ಧೆಗೆ ಯಾವುದೇ ವಯೋಮಿತಿ ಇರುವುದಿಲ್ಲ. ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ವಿಭಾಗದಲ್ಲಿ ಮ್ಯಾರಥಾನ್ ಸಾಗಲಿದ್ದು, ಪುರುಷರು 10 ಕಿ.ಮೀ ಹಾಗೂ ಮಹಿಳೆಯರು 6 ಕಿ.ಮೀ ದೂರವನ್ನು ಕ್ರಮಿಸಬೇಕಾಗಿದೆ. ಪ್ರತಿಯೊಂದು ವಿಭಾಗದಲ್ಲಿ 6 ವಿಜೇತರನ್ನು ಆಯ್ಕೆ ಮಾಡಲಾಗುವುದು. ವಿಜೇತರಿಗೆ ನಗದು, ಫಲಕ, ಪದಕ ಹಾಗೂ ಪ್ರಮಾಣಪತ್ರದೊಂದಿಗೆ ಗೌರವಿಸಲಾಗುವುದು.
ಬ್ರಹ್ಮಾವರದ ಮಹೇಶ್ ಆಸ್ಪತ್ರೆಯ ಎದುರಿರುವ ವ್ಯಾಲೈಂಟೆನ್ ಮೈದಾನದಲ್ಲಿ ಮುಂಜಾನೆ 5.30ಕ್ಕೆ ಮ್ಯಾರಥಾನ್ ಸಮಾವೇಶಗೊಂಡು ಎನ್.ಎಚ್ 66 ಮೂಲಕ ರುಡ್ ಸೆಟ್ ರಸ್ತೆ ಮೂಲಕ ಕೃಷಿ ಕೇಂದ್ರಕ್ಕೆ ತಲುಪಿ, ಪುನಃ ಬ್ರಹ್ಮಾವರದ ಕಡೆ ಸಾಗಿ, ರಥಬೀದಿ ಮೂಲಕ ಆಕಾಶವಾಣಿ ಮಾರ್ಗವಾಗಿ-ಧರ್ಮಾವರ ಆಡೀಟೋರಿಯಂ ಮುಂಭಾಗಕ್ಕೆ ತಲುಪಿ, ಅಲ್ಲಿಂದ ಹಿಂದಿರುಗಿ ಪ್ರಾರಂಭಿಕ ಸ್ಥಳದಲ್ಲೇ ಮುಕ್ತಾಯಗೊಳ್ಳಲಿದೆ ಎಂದು ತಿಳಿಸಿದರು.
ಸಂಸ್ಥೆಯ ಮುಖ್ಯಸ್ಥರಾದ ಪ್ರಶಾಂತ್ ಕುಂದರ್, ಪ್ರಶಾಂತ್ ಪೂಜಾರಿ, ಎ.ಕೆ.ಶೆಟ್ಟಿ ನಡೂರು, ಸುನಿಲ್ ಕುಮಾರ್, ಜಾನ್ ಲೋಬೋ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.