ಹಟ್ಟಿಯ ಗೋಡೆ ಕುಸಿದು ಮೃತರಾದ ಗಂಗಾ ಅವರ ಮನೆಗೆ ಶಾಸಕ ರಘುಪತಿ ಭಟ್ ಭೇಟಿ

ಉಡುಪಿ: ಚೇರ್ಕಾಡಿ ಸಮೀಪದ ಬೆನಗಲ್ ಹಾಡಿಬೆಟ್ಟುವಿನಲ್ಲಿ‌ ಹಾಲು ಕರೆಯುವ ಸಂದರ್ಭದಲ್ಲಿ ಗೋಡೆ‌ ಬಿದ್ದು ಮೃತಪಟ್ಟಿರುವ  ಮಹಿಳೆ ಗಂಗಾ ಅವರ ಮನೆಗೆ ಉಡುಪಿ ಶಾಸಕ‌ ಕೆ. ರಘುಪತಿ ಭಟ್ ಭೇಟಿ ನೀಡಿದರು.
ಸಂಜೆ ಬೆಂಗಳೂರಿನಿಂದ ಬಂದ ಕೂಡಲೇ ಅಧಿಕಾರಿಗಳ ಜತೆಗೆ ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಪರಿಹಾರ ಕಲ್ಪಿಸುವ ಬಗ್ಗೆ ಸೂಚನೆ ನೀಡಿದರು. ಹಾಗೆಯೇ ತಕ್ಷಣ ಪ್ರಕೃತಿ ವಿಕೋಪ ತುರ್ತು ಪರಿಹಾರ ನಿಧಿಯಿಂದ ಮೃತರ ಕುಟುಂಬಕ್ಕೆ ಪ್ರಥಮ ಹಂತದ 4 ಲಕ್ಷ ಪರಿಹಾರ ಹಣವನ್ನು ನಾಳೆ ಸಂಸದರ ಮುಖಾಂತರ ನೀಡುವುದಾಗಿ ಘೋಷಿಸಿದರು. ಮುಂದೆ ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ ನೀಡುವುದಾಗಿ ತಿಳಿಸಿದರು.
ಶಾಸಕರ ಜತೆಗೆ ಬ್ರಹ್ಮಾವರ ತಹಶಿಲ್ದಾರ್ ಕಿರಣ್, ಕಂದಾಯ ಅಧಿಕಾರಿ ಲಕ್ಷ್ಮೀನಾರಾಯಣ ಭಟ್, ಚೇರ್ಕಾಡಿ ಪಂಚಾಯತ್ ಅಧ್ಯಕ್ಷ ಹರೀಶ್ ಶೆಟ್ಟಿ ಚೇರ್ಕಾಡಿ, ಬಿಜೆಪಿ ಗ್ರಾಮಾಂತರ ಭಾಗದ ಕಾರ್ಯದರ್ಶಿ ಕಮಾಲಾಕ್ಷ ಹೆಬ್ಬಾರ್, ಎಪಿಎಂಸಿ ಅಧ್ಯಕ್ಷ ಶ್ಯಾಮ್ ಪ್ರಸಾದ್ ಭಟ್, ದನಂಜಯ್ ಅಮೀನ್ ಉಪಸ್ಥಿತರಿದ್ದರು.