ವಿಆರ್‌ಎಲ್ ಸಮೂಹ ಸಂಸ್ಥೆ ಪ್ರಾಯೋಜಕತ್ವದ ಬ್ರೈಲ್ ಲಿಪಿಯಲ್ಲಿ ಬರೆದ ಪತ್ರಿಕೆ ಲೋಕಾರ್ಪಣೆ: ನೇತ್ರಹೀನರಿಗೆ ಪ್ರಧಾನಿ ಮೋದಿ ಜೀವನದ ಬಗ್ಗೆ ತಿಳಿಸುವ ಪ್ರಯತ್ನ

ನವದೆಹಲಿ: ದೇಶದ ಏಳು ಕೋಟಿ ಅಂಧರು, ದೃಷ್ಟಿದೋಷ ಇರುವವರು ಪ್ರಧಾನಿ ನರೇಂದ್ರ ಮೋದಿಯವರ ಜೀವನ, ಕಾರ್ಯ ಮತ್ತು ನಾಯಕತ್ವದ ಬಗ್ಗೆ ತಿಳಿದುಕೊಳ್ಳಬೇಕು ಎಂಬ ಉದ್ದೇಶದಿಂದ ಹುಬ್ಬಳ್ಳಿ ಮೂಲದ ಟೀಮ್ ಸೆನ್ಸ್ ಎಸೆನ್ಸ್ ಸಂಸ್ಥೆಯು ಬ್ರೈಲ್ ಲಿಪಿಯಲ್ಲಿ ಸಿದ್ಧಪಡಿಸಿದ ‘ಎ ಪ್ರಾಮೀಸ್ಡ್ ನೇಷನ್ ಹಾನರೇಬಲ್ ಶ್ರೀ ನರೇಂದ್ರ ಮೋದಿ- ದ ಮೇಕರ್ ನ್ಯೂ ಆಫ್ ಇಂಡಿಯಾ’ ಎಂಬ ಪುಸ್ತಕವನ್ನು ಕೇಂದ್ರ ಗೃಹ ಸಚಿವ ಅಮಿತ್ ಷಾ ಲೋಕಾರ್ಪಣೆಗೊಳಿಸಿದರು.

ವಿಆರ್‌ಎಲ್ ಸಮೂಹ ಸಂಸ್ಥೆಯ ಸಹಯೋಗ ಮತ್ತು ಪ್ರಾಯೋಜಕತ್ವದಲ್ಲಿ ಈ ಪುಸ್ತಕ ಹೊರತರಲಾಗಿದೆ.

ದೆಹಲಿಯ ನಾರ್ತ್ ಬ್ಲಾಕ್‌ನಲ್ಲಿರುವ ತಮ್ಮ ಕಚೇರಿಯಲ್ಲಿ ವಿಆರ್‌ಎಲ್ ಸಮೂಹ ಸಂಸ್ಥೆಗಳ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಆನಂದ ಸಂಕೇಶ್ವರ ಮತ್ತು ಟೀಮ್ ಸೆನ್ಸ್ ಎಸೆನ್ಸ್ ಸಂಸ್ಥೆಯ ಸಂಸ್ಥಾಪಕಿಯರಾದ ರುಷಾಲಿ ದೋಶಿ ಮತ್ತು ಯಶ್ವಿ ಭಂಡಾರಿ ಉಪಸ್ಥಿತಿಯಲ್ಲಿ ಕೇಂದ್ರ ಸಚಿವ ಅಮಿತ್ ಷಾ ಪುಸ್ತಕ ಬಿಡುಗಡೆಗೊಳಿಸಿದರು.

‘ದೇಶದ ಎರಡೂವರೆ ಲಕ್ಷ ಅಂಧ ಮಕ್ಕಳು ಹಾಗೂ ಕಣ್ಣಿನ ಸಮಸ್ಯೆ ಎದುರಿಸುತ್ತಿರುವ 7 ಕೋಟಿ ಜನರು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಈ ಪುಸ್ತಕದಿಂದ ಸಾಕಷ್ಟು ಮಾಹಿತಿ ಪಡೆದುಕೊಳ್ಳಬಹುದು. ಇದು ನಿಜಕ್ಕೂ ಸಾಹಸಮಯ ಕೆಲಸ. ವಿಆರ್‌ಎಲ್ ಸಂಸ್ಥೆ ಮತ್ತು ಟೀಮ್ ಸೆನ್ಸ್ ಎಸೆನ್ಸ್ ಸಂಸ್ಥೆಗೆ ಅಭಿನಂದನೆಗಳು’ ಎಂದು ಅಮಿತ್ ಷಾ ಮೆಚ್ಚುಗೆ ವ್ಯಕ್ತಪಡಿಸಿದರು.

‘ಪ್ರಧಾನಿ ನರೇಂದ್ರ ಮೋದಿಯವರು ಕಳೆದ 10 ವರ್ಷಗಳಲ್ಲಿ ದೇಶದ ನಾಗರಿಕ ಮೌಲ್ಯ ಮತ್ತು ಸಾಂಸ್ಕೃತಿಕ ತತ್ವಗಳನ್ನು ಪುನರುಜ್ಜೀವನಗೊಳಿಸಿ, ಹೊಸ ಭಾರತದ ಸೌಧವನ್ನು ನಿರ್ಮಾಣ ಮಾಡಿದ್ದಾರೆ. ಈ ಹಾದಿಯಲ್ಲಿ ಮೋದಿಯವರು ಭಾರತದ ಅಂತರಂಗದ ಜಗತ್ತನ್ನು ಮತ್ತಷ್ಟು ಜಾಗೃತಗೊಳಿಸಿದ್ದಾರೆ’ ಎಂದು ಅಭಿಪ್ರಾಯಪಟ್ಟ ಅಮಿತ್ ಷಾ, ಈ ಪುಸ್ತಕ ಬ್ರೈಲ್ ಲಿಪಿಯಲ್ಲಿದೆ. ಮೋದಿಯವರ ಜೀವನ, ಕಾರ್ಯ, ಮಾಡಿದ ಸಾಧನೆಗಳ ಬಗ್ಗೆ ತಿಳಿದುಕೊಳ್ಳಲು ಅನುಕೂಲವಾಗಲಿದೆ ಎಂದು ತಿಳಿಸಿದರು.

ವಿಆರ್‌ಎಲ್ ಸಂಸ್ಥೆಯ ಎಂಡಿ ಡಾ. ಆನಂದ ಸಂಕೇಶ್ವರ, ಸೆನ್ಸ್ ಎಸೆನ್ಸ್ ಸಂಸ್ಥೆಯ ರುಷಾಲಿ ದೋಶಿ ಮತ್ತು ಯಶ್ವಿ ಭಂಡಾರಿ ಇದ್ದರು.

ಅಂಧರಿಗಾಗಿ ಶ್ರಮಿಸಬೇಕೆಂಬ ಉದ್ದೇಶ:
ಯಶ್ವಿ ಭಂಡಾರಿ ಮತ್ತು ರುಷಾಲಿ ದೋಶಿ 2019ರಲ್ಲಿ ಸೆನ್ಸ್ ಎಸೆನ್ಸ್ ಸಂಸ್ಥೆ ಹುಟ್ಟು ಹಾಕಿದರು. ಕರೊನಾ ಮಹಾಮಾರಿ ಕಾಲದಲ್ಲಿ ದೃಷ್ಟಿ ದೋಷವುಳ್ಳವರ ಸಲುವಾಗಿ ಕೆಲಸ ಮಾಡಲು ಶುರು ಮಾಡಿದ್ದರು. ಈಗಾಗಲೇ, ‘ಲವ್ ಯುವರ್ ಐಸ್’ ಎಂಬ ಯೋಜನೆ ಮೂಲಕ ರೈಲ್ವೆ ನಿಲ್ದಾಣಗಳಲ್ಲಿ ದೃಷ್ಟಿ ದೋಷವಿದ್ದವರ ನೆರವಿಗೆ ಧಾವಿಸಿದ್ದಾರೆ. ಸ್ಪರ್ಶಜ್ಞಾನದಿಂದ ತಿಳಿಯಬಹುದಾದ ಮ್ಯಾಪ್, ಬ್ರೈಲ್ ಸೈನ್ ಬೋರ್ಡ್‌ಗಳನ್ನೊಳಗೊಂಡಿರುವ ಪುಸ್ತಕ ಇದಾಗಿದ್ದು, ಧಾರವಾಡ ಮತ್ತು ಬೆಳಗಾವಿ ರೈಲ್ವೆ ನಿಲ್ದಾಣಗಳಲ್ಲಿ ಕಾಣಬಹುದಾಗಿದೆ. ಇದನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು 2022ರ ಅಕ್ಟೋಬರ್ 11ರಂದು ಬಿಡುಗಡೆಗೊಳಿಸಿದ್ದರು. ಅದೇ ರೀತಿ, ಮ್ಯಾಜಿಕಲ್ ಡಾಟ್ಸ್ ಎಂಬ ನಿಯತಕಾಲಿಕವನ್ನು ಕೂಡ ಸೆನ್ಸ್ ಎಸೆನ್ಸ್ ಸಂಸ್ಥೆ ಹೊರತಂದಿದೆ.

ಇದನ್ನು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು 2021ರ ಆಗಸ್ಟ್ 30ರಂದು ಬಿಡುಗಡೆ ಮಾಡಿದ್ದರು. ಬ್ರೈಲ್ ಲಿಪಿಯಲ್ಲಿರುವ ಕರ್ನಾಟಕದ ಮೊಟ್ಟಮೊದಲ ಮ್ಯಾಗಜೀನ್ ಇದಾಗಿದ್ದು, ಅಂಧ ವಿದ್ಯಾರ್ಥಿಗಳಿರುವ ಅನೇಕ ಶಾಲೆಗಳಿಗೂ ಪೂರೈಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ತಮ್ಮ ನಾಯಕತ್ವದಲ್ಲಿ ದೇಶವನ್ನು ಹೊಸ ಉತ್ತುಂಗಕ್ಕೆ ಕೊಂಡೊಯ್ಯಲು ಶ್ರಮಿಸುತ್ತಿರುವುದರಿಂದ, ದೇಶದ ಅನೇಕರಿಗೆ ಅವರು ಪ್ರೇರಣಾದಾಯಿಯಾಗಿದ್ದಾರೆ. ಹೀಗಾಗಿ, ಈ ಸಾಧಕ ಪ್ರಧಾನಿ ಬಗ್ಗೆ ಅಂಧ ಮಕ್ಕಳೂ ತಿಳಿದುಕೊಳ್ಳು ವಂತಾಗಬೇಕು ಎಂಬ ಉದ್ದೇಶದಿಂದ ಈ ಪುಸ್ತಕ ಸಿದ್ಧಪಡಿಸಲು ಮುಂದಾದೆವು. ಪುಸ್ತಕ ರೂಪಿಸಲು ಕಳೆದ ಹಲವು ತಿಂಗಳುಗಳಿಂದ ಸಾಕಷ್ಟು ಶ್ರಮಿಸಿದ್ದೇವೆ. ನಮ್ಮನ್ನು ಪ್ರೋತ್ಸಾಹಿಸಿದ ವಿಆರ್‌ಎಲ್ ಸಂಸ್ಥೆಯ ಎಂಡಿ ಡಾ. ಆನಂದ ಸಂಕೇಶ್ವರ ಅವರಿಗೂ ನಾವು ಆಭಾರಿಯಾಗಿದ್ದೇವೆ. ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ರಾಜೀವ್ ಚಂದ್ರಶೇಖರ್, ಅರ್ಜುನ್ ರಾಮ್ ಮೇಘ್ವಾಲ್, ಸ್ಮೃ ತಿ ಇರಾನಿ, ಮಾಜಿ ಸಿಎಂಗಳಾದ ಬಸವರಾಜ ಬೊಮ್ಮಾಯಿ, ಜಗದೀಶ ಶೆಟ್ಟರ್, ಆರ್‌ಎಸ್‌ಎಸ್ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ, ಶಾಸಕ ಮಹೇಶ ಟೆಂಗಿನಕಾಯಿ, ಮಾಜಿ ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಸೇರಿ ಹಲವರು ನಮ್ಮ ಕೆಲಸಕ್ಕೆ ಬೆಂಬಲ ನೀಡಿದ್ದಾರೆ ಎಂದು ರುಷಾಲಿ ದೋಶಿ ಮತ್ತು ಯಶ್ವಿ ಭಂಡಾರಿ ಹೇಳಿದ್ದಾರೆ.