ಉಡುಪಿ: ನಂದಕಿಶೋರ್ ನಿರ್ದೇಶನದ ‘ಪೊಗರು’ ಚಿತ್ರದಲ್ಲಿ ಬ್ರಾಹ್ಮಣರನ್ನು ಅವಹೇಳನ ಮಾಡಿರುವುದಕ್ಕೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.
ಚಿತ್ರದ ಅನೇಕ ದೃಶ್ಯಗಳಲ್ಲಿ ಬ್ರಾಹ್ಮಣರನ್ನು ತೀರಾ ಅವಮಾನಿಸಲಾಗಿದ್ದು, ಇದರಿಂದ ಬ್ರಾಹ್ಮಣರ ಭಾವನೆಗಳಿಗೆ ತೀರಾ ನೋವಾಗಿದೆ. ಇಂಥಹ ಬೆಳವಣಿಗೆಗಳು ಅಸಹನೀಯವಾಗಿದೆ. ಕೇವಲ ಬ್ರಾಹ್ಮಣರನ್ನು ಮಾತ್ರವಲ್ಲ, ಯಾವುದೇ ಜಾತಿ ಸಮುದಾಯಗಳನ್ನು ನಿಂದಿಸುವ ಅವಮಾನಿಸುವ ಪ್ರವೃತ್ತಿ ಸಲ್ಲದು. ಈ ಮೂಲಕ ಮನೋರಂಜನೆ ನೀಡುತ್ತೇವೆ ಅನ್ನೋ ಭ್ರಮೆಯಿಂದ ಚಿತ್ರರಂಗ ಹೊರಬರಬೇಕು ಎಂದರು.
ತಕ್ಷಣವೇ ಪೊಗರು ಚಿತ್ರದಲ್ಲಿ ಬ್ರಾಹ್ಮಣ ಸಮಾಜವನ್ನು ನಿಂದಿಸುವ ದೃಶ್ಯಗಳನ್ನು ತೆರವುಗೊಳಿಸಬೇಕು ಎಂದು ಪೇಜಾವರ ಶ್ರೀಗಳು ಆಗ್ರಹಿಸಿದ್ದಾರೆ.
ಈ ವಿಚಾರವಾಗಿ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನೇತೃತ್ವದಲ್ಲಿ ಮಂಗಳವಾರ ಬೆಂಗಳೂರಿನಲ್ಲಿ ಅನೇಕ ಬ್ರಾಹ್ಮಣ ಸಂಘಟನೆಗಳು ಪ್ರತಿಭಟನೆ ನಡೆಸಿ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ ಅರ್ಪಿಸುವ ಸಂದರ್ಭ ಶ್ರೀಗಳು ಅಲ್ಲಿದ್ದ ಬ್ರಾಹ್ಮಣ ಸಮಾಜದ ಮುಖಂಡರ ಮೊಬೈಲ್ ಮೂಲಕ ಚಲನಚಿತ್ರ ಮಂಡಳಿಯ ಪ್ರಮುಖರೊಂದಿಗೆ ಮಾತನಾಡಿ ಖಂಡನೆಯನ್ನು ವ್ಯಕ್ತಪಡಿಸಿ ಕೂಡಲೇ ವಿವಾದಿತ ದೃಶ್ಯಗಳ ಕತ್ತರಿಗೆ ಒತ್ತಾಯಿಸಿದ್ದಾರೆ.