ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನಾರಂಭಿಸಲು ಸಾಧ್ಯವಿಲ್ಲ: ಸಚಿವ ಮುರುಗೇಶ್ ನಿರಾಣಿ

ಉಡುಪಿ: ಬ್ರಹ್ಮಾವರ ಸಕ್ಕರೆ ಕಾರ್ಖಾನೆಗಾಗಿ ಕಬ್ಬು ಬೆಳೆಸುತ್ತಿದ್ದ ಭೂಮಿಯನ್ನು ಪರಿವರ್ತನೆ ಮಾಡಿ ಅಡಿಕೆ ಬೆಳೆಸಲಾಗುತ್ತಿದೆ. ಉಳಿದ ಭಾಗಕ್ಕೆ ಹೋಲಿಕೆ ಮಾಡಿದರೆ ಇಲ್ಲಿ ಬೆಳೆದ ಕಬ್ಬಿನಲ್ಲಿ ಸಕ್ಕರೆ ಬರುವುದು ಕಡಿಮೆ. ಆದುದರಿಂದ ಈಗಾಗಲೇ ಮುಚ್ಚಿರುವ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯನ್ನು ಮತ್ತೆ ಸಕ್ಕರೆ ಕಾರ್ಖಾನೆಯಾಗಿ ಪುನಾರಂಭಿಸಲು ಸಾಧ್ಯವೇ ಇಲ್ಲ ಎಂದು ರಾಜ್ಯ ಬೃಹತ್ ಹಾಗೂ ಮಾಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.

ಇಂದ್ರಾಳಿಯಲ್ಲಿರುವ ಉಡುಪಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಚೇರಿಯಲ್ಲಿ ಸೋಮವಾರ ನಡೆದ ಕೈಗಾರಿಕೋದ್ಯಮಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕರಾವಳಿಯಲ್ಲಿ ಬೆಳೆದ ಒಂದು ಟನ್ ಕಬ್ಬಿನಲ್ಲಿ 90-92 ಕೆ.ಜಿ. ಸಕ್ಕರೆ ಬಂದರೆ, ಉತ್ತರ ಕರ್ನಾಟಕದಲ್ಲಿ 120-125ಕೆ.ಜಿ., ಮೈಸೂರು ಭಾಗದಲ್ಲಿ 95-100 ಕೆ.ಜಿ., ಮದ್ಯ ಕರ್ನಾಟಕದಲ್ಲಿ 100-115 ಕೆ.ಜಿ. ತೆಗೆಯಬಹುದಾಗಿದೆ. ಇದಕ್ಕೆ ಆಯಾ ಪ್ರದೇಶದ ಹವಾಮಾನ, ಮಣ್ಣಿನ ಗುಣ ಕಾರಣವಾಗಿದೆ. ಕಬ್ಬಿಗಿಂತ ಅಡಿಕೆಯಲ್ಲಿ ಹೆಚ್ಚಿನ ಲಾಭ ಇರುವುದರಿಂದ ಇಲ್ಲಿನ ಜನ ಇನ್ನು ಅಡಿಕೆಯಿಂದ ಕಬ್ಬಿಗೆ ಪರಿವರ್ತನೆ ಆಗುವುದಿಲ್ಲ. ಆದುದರಿಂದ ಸಕ್ಕರೆ ಕಾರ್ಖಾನೆ ಆರಂಭ ಕಷ್ಟ ಸಾಧ್ಯವಾಗಿದೆ ಎಂದರು.