ಬ್ರಹ್ಮಾವರ: ವಿಶಾಲ ಗಾಣಿಗ ಕೊಲೆ ಪ್ರಕರಣ: ನಾಲ್ಕು ಪೊಲೀಸರ ತಂಡ ರಚನೆ; ವಿವಿಧ ಆಯಾಮಗಳಲ್ಲಿ ತನಿಖೆ ಆರಂಭ

ಉಡುಪಿ: ಬ್ರಹ್ಮಾವರ ಕುಮ್ರಗೋಡುವಿನ ಫ್ಲಾಟ್ ವೊಂದರಲ್ಲಿ ಸೋಮವಾರ ಸಂಜೆ ನಡೆದ ವಿಶಾಲ ಗಾಣಿಗ ಎಂಬ ಮಹಿಳೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿ ರಿಕ್ಷಾ ಚಾಲಕನೋರ್ವನನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ರಿಕ್ಷಾ ಚಾಲಕನ ವಿಚಾರಣೆ.?
ರಿಕ್ಷಾ ಚಾಲಕ ವಿಶಾಲ ಅವರಿಗೆ ಪರಿಚಯಸ್ಥನಾಗಿದ್ದು, ಅವರ ಅಪಾರ್ಟ್ ಮೆಂಟ್ ಪಕ್ಕದಲ್ಲೇ ವಾಸವಿದ್ದನು. ವಿಶಾಲ ಅವರು ತಮ್ಮ ಕೆಲಸಕಾರ್ಯಗಳಿಗೆ ಆತನ ರಿಕ್ಷಾದಲ್ಲೇ ಹೆಚ್ಚಾಗಿ ಓಡಾಡುತ್ತಿದ್ದರು. ಅಲ್ಲದೆ ಕೊಲೆ ನಡೆದ ದಿನವೂ ವಿಶಾಲ ಅವರು ಆತನ ರಿಕ್ಷಾದಲ್ಲಿ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಆತನ ವಿಚಾರಣೆ ನಡೆಸಲಾಗಿದೆ ಎನ್ನಲಾಗಿದೆ.

ನಾಲ್ಕು ತಂಡ ರಚನೆ:
ಕೊಲೆ ಪ್ರಕರಣದ ಆರೋಪಿಗಳ ಶೋಧಕ್ಕಾಗಿ ನಾಲ್ಕು ಪೊಲೀಸರ ತಂಡವನ್ನು ರಚಿಸಿದ್ದು, ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ತನಿಖಾಧಿಕಾರಿ ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತ ಪದ್ಮನಾಭ, ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ್, ಮಣಿಪಾಲ ಠಾಣಾ ಪೊಲೀಸ್ ನಿರೀಕ್ಷಕ ಮಂಜುನಾಥ್ ಎಂ., ಉಡುಪಿ ನಗರ ಠಾಣಾ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ನೇತೃತ್ವದಲ್ಲಿ ತಂಡಗಳನ್ನು ರಚಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ವಿಷ್ಣುವರ್ಧನ್ ತಿಳಿಸಿದ್ದಾರೆ.

ಸಿಸಿಟಿವಿ ಇಲ್ಲ:
ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು, ಕೊಲೆ ಕೊಲೆಗಡುಕರ ಶೋಧಕ್ಕಾಗಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಸಿಸಿಟಿವಿ ಫೂಟೇಜ್‌ಗಳನ್ನು ಕಲೆ ಹಾಕುವ ಕಾರ್ಯವನ್ನು ನಡೆಸುತ್ತಿದ್ದಾರೆ. ಆದರೆ ಕೊಲೆ ನಡೆದ ಮಿಲನ ರೆಸಿಡೆನ್ಸಿಯಲ್ಲಿ ಯಾವುದೇ ಸಿಸಿಟಿವಿ ಅಳವಡಿಸದಿರುವುದು ತನಿಖೆ ತೊಂದರೆಯಾಗಿದೆ. ಹೀಗಾಗಿ ಪೊಲೀಸರು ಅಲ್ಲಿನ ಸುತ್ತಮುತ್ತಲಿನ ಅಂಗಡಿ, ಕಟ್ಟಡಗಳಲ್ಲಿ ಇರುವ ಸಿಸಿಟಿವಿಗಳನ್ನು ಪರಿಶೀಲನೆ ನಡೆಸುವ ಕಾರ್ಯದಲ್ಲಿ ತೊಡಗಿದ್ದಾರೆ.

ದುಬೈಯಲ್ಲಿ ವಾಸ

ಗುಜ್ಜಾಡಿ ಗ್ರಾಮದ ನಾಯಕವಾಡಿಯ ವಾಸು ಗಾಣಿಗ ಎಂಬವರ ಕೊನೆಯ ಪುತ್ರಿ ವಿಶಾಲ ಗಾಣಿಗ. ಅವರು ಬೀಜೂರು ಚಾರುಕೊಡ್ಲು ನಿವಾಸಿ ರಾಮಕೃಷ್ಣ ಗಾಣಿಗ ಎಂಬವರನ್ನು ವಿವಾಹವಾಗಿ ಕುಮ್ರಗೋಡು ಗ್ರಾಮದ ಫ್ಲ್ಯಾಟ್‌ನಲ್ಲಿ ವಾಸವಾಗಿದ್ದರು. ನಂತರ ಈಕೆ ತನ್ನ ಗಂಡ ಹಾಗೂ ಮಗು ಆರ್ವಿಯೊಂದಿಗೆ ದುಬೈಯಲ್ಲಿ ನೆಲೆಸಿದ್ದರು.

ಆಸ್ತಿ ಪಾಲಿಗೆ ಊರಿಗೆ ಬಂದಿದ್ದರು
ರಾಮಕೃಷ್ಣರವರ ಹಿರಿಯರ ಆಸ್ತಿ ಪಾಲಿನ ವಿಚಾರವಾಗಿ ವಿಶಾಲಾ ಗಾಣಿಗ ತನ್ನ ಗಂಡ ಮತ್ತು ಮಗು ಆರ್ವಿ ಯೊಂದಿಗೆ ದುಬೈಯಿಂದ ಜುಲೈ 2ರಂದು ಊರಿಗೆ ಬಂದು ಕುಮ್ರಗೋಡುವಿನ ಫ್ಲ್ಯಾಟ್‌ನಲ್ಲಿ ನೆಲೆಸಿದ್ದರು.

ಜು.7ರಂದು ರಾಮಕೃಷ್ಣರವರ ಆಸ್ತಿಪಾಲು ಪಟ್ಟಿ ಆಗಿತ್ತು. ಬಳಿಕ ಜು.12ರಂದು ವಿಶಾಲಾ ಗಾಣಿಗ ತನ್ನ ತಂದೆ-ತಾಯಿ ಮತ್ತು ಮಗನೊಂದಿಗೆ ರಿಕ್ಷಾದಲ್ಲಿ ಫ್ಲ್ಯಾಟ್‌ನಿಂದ ತಾಯಿ ಮನೆಯಾದ ಗುಜ್ಜಾಡಿಗೆ ಬಂದಿದ್ದರು.

ಬಳಿಕ ವಿಶಾಲ ಅವರು ನಾನು ಬ್ರಹ್ಮಾವರ ಕೆನರಾ ಬ್ಯಾಂಕ್‌ನಿಂದ ಹಣ ಡ್ರಾ ಮಾಡಿ ಆ ಹಣವನ್ನು ಗಂಡನ ಮನೆಗೆ ಕೊಟ್ಟು ಬರುವುದಾಗಿ ಹೇಳಿ ಅದೇ ರಿಕ್ಷಾದಲ್ಲಿ ವಾಪಸ್ ಹೊರಟು ಹೋಗಿದ್ದರು. ಆದರೆ ಮಧ್ಯಾಹ್ನ ಆದರೂ ವಿಶಾಲಾ ಮನೆಗೆ ವಾಪಸ್ಸು ಬರಲಿಲ್ಲ. ಆಗ ಆಕೆಯ ತಂದೆ ಮೊಬೈಲ್ ಗೆ ಕರೆ ಮಾಡಿದಾಗ ನಾಟ್ ರೀಚೆಬಲ್ ಬಂದಿತ್ತು. ಕೂಡಲೇ ಅವರು ರಾಮಕೃಷ್ಣಗೆ ಕರೆಮಾಡಿ ವಿಚಾರಿಸಿದ್ದಾರೆ. ಸುಮಾರು ಮಧ್ಯಾಹ್ನ 12 ಗಂಟೆ ಸುಮಾರಿಗೆ ಆಕೆ ತಾನು ಸಾಲಿಗ್ರಾಮದಲ್ಲಿ ಇದ್ದೇನೆ. ಬ್ರಹ್ಮಾವರ ಬ್ಯಾಂಕಿಗೆ ಹೋಗಿ ನಂತರ ಮಗುವಿನ ಹುಟ್ಟುಹಬ್ಬಕ್ಕೆ ಕೇಕ್ ಆರ್ಡರ್ ಮಾಡಿರುವುದಾಗಿ ಮೆಸೇಜ್ ಮಾಡಿದ್ದಳು ಎಂದು ಅವರು ತಿಳಿಸಿದ್ದರು.

ಕೆಲ ಹೊತ್ತಿನ ಬಳಿಕ ವಿಶಾಲ ಅವರ ಪತಿ ರಾಮಕೃಷ್ಣ, ತನ್ನ ಮಾವ ವಾಸು ಗಾಣಿಗರಿಗೆ ಕರೆ ಮಾಡಿ ವಿಶಾಲ ಫೋನ್ ಗೆ ಸಿಗುತ್ತಿಲ್ಲ ಹೇಳಿದ್ದಾರೆ. ಅದರಂತೆ ವಾಸು ಗಾಣಿಗ ಮತ್ತು ಅವರ ಇನ್ನೊಬ್ಬಳು ಮಗಳು ವಿನಯಾ ಸಂಜೆ 6:10ರ ಸುಮಾರಿಗೆ ಫ್ಲ್ಯಾಟ್‌ಗೆ ಹೋದರು. ಆಗ ಫ್ಲ್ಯಾಟ್‌ನ ರೂಮ್ ಲಾಕ್ ಆಗಿದ್ದು, ತಮ್ಮಲ್ಲಿದ್ದ ಕೀಯಿಂದ ಬಾಗಿಲು ತೆರೆದು ಒಳಗೆ ನೋಡಿದಾಗ ಬೆಡ್ ರೂಮ್‌ನ ನೆಲದ ಮೇಲೆ ವಿಶಾಲಾ ಕೊಲೆಯಾಗಿ ಬಿದ್ದಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ

ಕುತ್ತಿಗೆ ವಯರ್ ಬಿಗಿದು ಕೊಲೆ
ವಿಶಾಲಾ ಅವರನ್ನು ಎಲೆಕ್ಟ್ರಾನಿಕ್ ಉಪಕರಣದ ಪವರ್ ಕೇಬಲ್ ಬಿಗಿದು ಕೊಲೆ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಆಕೆಯ ಮೃತದೇಹದ ಪಕ್ಕದಲ್ಲಿಯೇ ಎಲೆಕ್ಟ್ರಾನಿಕ್ ಉಪಕರಣದ ವಯರ್ ತುಂಡಾಗಿ ಬಿದ್ದುಕೊಂಡಿತ್ತು. ಕುತ್ತಿಗೆಗೆ ವಯರ್ ಬಿಗಿದಿರುವ ಮಾರ್ಕ್ ಕೂಡ ಕಂಡುಬಂದಿದೆ. ಅಲ್ಲದೆ, ಆಕೆಯು ಧರಿಸಿದ್ದ ಎರಡು ಗಟ್ಟಿ ಚಿನ್ನದ ಬಳೆಗಳು, ಕರಿಮಣಿ ಸರ ಮತ್ತು ಒಂದ ಜೊತೆ ಕಿವಿಯೋಲೆ ಸೇರಿದಂತೆ ಒಟ್ಟು 2 ಲಕ್ಷ ರೂ. ವೌಲ್ಯದ 50 ಗ್ರಾಂ ತೂಕದ ಚಿನ್ನಾಭರಣಗಳು ಕಾಣೆಯಾಗಿದೆ. ಹೀಗಾಗಿ ದುಷ್ಕರ್ಮಿಗಳು ಚಿನ್ನಾಭರಣಗಳನ್ನು ದರೋಡೆ ಮಾಡುವ ಉದ್ದೇಶದಿಂದ ವಿಶಾಲಾ ಗಾಣಿಗರನ್ನು ಕೊಲೆ ಮಾಡಿರಬಹುದು ಎಂದು ತಂದೆ ವಾಸು ಗಾಣಿಗ ದೂರಿನಲ್ಲಿ ತಿಳಿಸಿದ್ದಾರೆ.