ಬ್ರಹ್ಮಾವರ: ನಾಪತ್ತೆಯಾಗಿದ್ದ 52ನೇ ಹೇರೂರು ಗ್ರಾಮದ ಹೇರಂಜೆಯ ಗೌತಮ್ (21) ಎಂಬ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದು, ಆತನ ಮೃತದೇಹ ಬಾರ್ಕೂರು ಹಂದಾಡಿ ಮರ್ಬು ಹೊಳೆಯ ನೀರಿನಲ್ಲಿ ಇಂದು ಮಧ್ಯಾಹ್ನ ಪತ್ತೆಯಾಗಿದೆ.
ಗೌತಮ್ ಅ. 15ರ ಗುರುವಾರ ರಾತ್ರಿಯಿಂದ ಕಾಣೆಯಾಗಿದ್ದ. ಅ. 15ರ ಗುರುವಾರ ಬೆಳಿಗ್ಗೆ 8 ಗಂಟೆಗೆ ಬೈಕ್ ನಲ್ಲಿ ತನ್ನ ತಾಯಿಯನ್ನು ಚಾಂತಾರು ಗೇರು ಬೀಜ ಫ್ಯಾಕ್ಟರಿಗೆ ಕೆಲಸಕ್ಕೆ ಬಿಟ್ಟಿದ್ದನು. ಬಳಿಕ ಬ್ರಹ್ಮಾವರ ಕಡೆಗೆ ಕೆಲಸಕ್ಕೆ ಹೋಗುವುದಾಗಿ ಹೇಳಿದ್ದನು. ಮನೆಯವರು ರಾತ್ರಿ 8 ಗಂಟೆಗೆ ಕರೆ ಮಾಡಿದಾಗ ತಾನು ಬ್ರಹ್ಮಾವರ ವಾರಂಬಳ್ಳಿಯ ಐಸೆಂಟ್ಸ್ನಲ್ಲಿ ಐಪಿಎಲ್ ಕ್ರಿಕೆಟ್ ಮ್ಯಾಚ್ ನೋಡುತ್ತಿದ್ದು, ಮನೆಗೆ ಬರುವುದು ತಡವಾಗುತ್ತದೆಂದು ಹೇಳಿದ್ದನು. ಆದರೆ ಗೌತಮ್ ಬೆಳಿಗ್ಗೆ ಆದರೂ ಮನೆಗೆ ಬಂದಿರಲಿಲ್ಲ.
ಮನೆಯವರು ಅ. 16 ರಂದು ಗೌತಮ್ ಗಾಗಿ ಹುಡುಕಾಟ ನಡೆಸಿದ್ದು, ಮನೆಯವರಿಗೆ ಬಾರ್ಕೂರು ಸೇತುವೆ ಮೇಲೆ ಆತನ ಮೋಟಾರ್ ಸೈಕಲ್, ಕೀ ಸಮೇತ, ಹೆಲ್ಮೆಟ್, ಜಾಕೆಟ್ ಪತ್ತೆಯಾಗಿದೆ. ಆದರೆ ಆತನ ಸುಳಿವು ಪತ್ತೆಯಾಗಿಲ್ಲ. ಇಂದು ಮಧ್ಯಾಹ್ನ ಮೀನು ಹಿಡಿಯುವವರಿಗೆ ಗೌತಮ್ ನ ಶವ ಸಿಕ್ಕಿದೆ.
ಡಿಪ್ಲೋಮ ವಿದ್ಯಾಭ್ಯಾಸ ಮುಗಿಸಿದ್ದ ಗೌತಮ್, ಕಳೆದ ಒಂದು ವರ್ಷದಿಂದ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದ ಎನ್ನಲಾಗಿದೆ. ಆದರೆ ಈವರೆಗೆ ಯಾವುದೇ ಕೆಲಸ ಸಿಕ್ಕಿರಲಿಲ್ಲ. ಇದೇ ಚಿಂತೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಬಾರ್ಕೂರು ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ತಂದೆ ದಾಮೋದರ ದೇಶ್ ಭಂಡಾರಿ ನೀಡಿದ ದೂರಿನಂತೆ ಬ್ರಹ್ಮಾವರ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.