ಉಡುಪಿ-ಬ್ರಹ್ಮಾವರ ವ್ಯಾಪ್ತಿ ಕಳವು ಪ್ರಕರಣ ಬೇಧಿಸಿದ ಪೊಲೀಸರು: ಆರೋಪಿಗಳ ಬಂಧನ; ಚಿನ್ನಾಭರಣ ವಶ

ಬ್ರಹ್ಮಾವರ: ಬ್ರಹ್ಮಾವರ ಮತ್ತು ಕೋಟಾ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸುವಲ್ಲಿ ಬ್ರಹ್ಮಾವರ ಸಿಪಿಐರವರ ವಿಶೇಷ ತಂಡ ಯಶಸ್ವಿಯಾಗಿದೆ. ಆರೋಪಿಯಿಂದ 7 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಕರಣ

ರಾತ್ರಿ ಸಮಯದಲ್ಲಿ ಮನೆಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಕಾದೂರು ತಂತ್ರಾಡಿಯ ವಿಜಯ್ ಕುಮಾರ್ ಶೆಟ್ಟಿಯನ್ನು ಬಂಧಿಸಲಾಗಿದೆ. ಜೈಲಿನಿಂದ ಬಿಡುಗಡೆಯಾದ ಕಳ್ಳತನದ ಆರೋಪಿಗಳ ಮಾಹಿತಿಯನ್ನು ಕಲೆಹಾಕಿ ಎಲ್ಲರ ಮೇಲೆ ನಿಗಾ ಇರಿಸಲಾಗಿತ್ತು. ಸೋಮವಾರದಂದು ಸಂಜೆ ನೀಲಾವರ ಕ್ರಾಸ್ ಬಳಿ ಆರೋಪಿ ವಿಜಯ್ ಕುಮಾರ್ ಶೆಟ್ಟಿಯನ್ನು ತಡೆದು ನಿಲ್ಲಿಸಿ ಆತನ ದ್ವಿಚಕ್ರ ವಾಹನವನ್ನು ಪರಿಶೀಲಿಸಿದಾಗ ಕಳ್ಳತನಕ್ಕೆ ಬೇಕಾದ ಪರಿಕರಿಗಳನ್ನು ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ಈತನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದಾಗ ಬ್ರಹ್ಮಾವರ ಮತ್ತು ಕೋಟಾ ವ್ಯಾಪ್ತಿಯಲ್ಲಿ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ತಿಳಿದುಬಂದಿದೆ.

ಈತನ ಮೇಲೆ ಕಳ್ಳತನದ ಹಲವಾರು ಪ್ರಕರಣಗಳಿದ್ದು, ನ್ಯಾಯಾಲಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಇದೀಗ ಕಳ್ಳ ಕದ್ದ ಮಾಲು ಸಮೇತ ಸಿಕ್ಕಿಬಿದ್ದಿದ್ದು, ಈತನಿಂದ 7 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ಇನ್ನಿತರ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಉಡುಪಿ ಎಸ್.ಪಿ ಅಕ್ಷಯ್ ಮಚ್ಚೀಂದ್ರ, ಎ.ಎಸ್.ಪಿ ಎಸ್.ಟಿ ಸಿದ್ದಲಿಂಗಪ್ಪ, ಸುಧಾಕರ್ ನಾಯ್ಕ್ ಸಹಯೋಗದೊಂದಿಗೆ ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತ ಪದ್ಮನಾಭ, ಉಪನಿರೀಕ್ಷಕ ರಾಜಶೇಖರ ವಂದಲಿ, ಮುಕ್ತಾಬಾಯಿ, ಮಧಿ ಬಿ.ಇ, ಮತ್ತು ಸಿಬ್ಬಂದಿಗಳು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Image

ಇದಲ್ಲದೆ, ಉಡುಪಿ ನಗರ ಠಾಣಾ ವ್ಯಾಪ್ತಿಯ ಕುಂಜಿಬೆಟ್ಟು ಶಿವಳ್ಳಿ ಗ್ರಾಮದ ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿಯೂ ಉಡುಪಿ ನಗರ ಠಾಣಾ ಪಿ ಐ ಮತ್ತು ತಂಡವು ಯಶಸ್ವಿಯಾಗಿದ್ದು, ಆರೋಪಿಯಿಂದ 4,35,325/- ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸ್ ಅಧೀಕ್ಷಕ ಹಾಕಿ ಅಕ್ಷಯ್ ಮಚ್ಚೀಂದ್ರ ಪ್ರಕರಣವನ್ನು ಭೇದಿಸಿರುವ ತಂಡವನ್ನು ಅಭಿನಂದಿಸಿರುತ್ತಾರೆ.

ಆರೋಪಿ ಪತ್ತೆಗೆ ವಿಶೇಷ ಕರ್ತವ್ಯದಲ್ಲಿ ಹೋದ ಠಾಣಾ ಸಿಬ್ಬಂದಿಗಳಾದ ಹೆಚ್.ಸಿ ಸತೀಶ್ ಬೆಳ್ಳೆ, ಪಿಸಿ ಆನಂದ ಎಸ್ ರವರು ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಸಾಧಿಕ್ ಉಲ್ಲಾನನ್ನು ಡಿ.19 ರಂದು ಉಡುಪಿ ಕೆಎಸ್ಆರ್ಟಿಸಿಬಸ್‌ ನಿಲ್ದಾಣದ ಬಳಿಯಿಂದ ವಶಕ್ಕೆ ಪಡೆದು ಆರೋಪಿಯು ಶಿಕಾರಿಪುರದ ತನ್ನ ಮನೆಯಲ್ಲಿ ಇಟ್ಟಿದ್ದ ಕಳವು ಮಾಡಿದ್ದ ಒಟ್ಟು ರೂ. 4,35,325/- ರೂಪಾಯಿ ಮೌಲ್ಯದ ಡೈಮಂಡ್ ಉಂಗುರ, ಚಿನ್ನಾಭರಣ, ಬೆಳಿಯ ಗಟ್ಟಿ, ಬೆಳ್ಳಿಯ ಆಭರಣ ಮತ್ತು ಚಿನ್ನದ ಲೇಪನ ಇರುವ ಆಭರಣಗಳನ್ನು ವಶಪಡಿಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

ಪ್ರಕರಣದಲ್ಲಿ ಆರೋಪಿಯ ಪತ್ತೆಗೆ ಪೊಲೀಸ್‌ ಅಧೀಕ್ಷಕ ಅಕ್ಷಯ ಮಚ್ಚೀಂದ್ರ ಹಾಕೆ ಆದೇಶದಂತೆ, ಎ.ಎಸ್.ಪಿ ಸಿದ್ಧಲಿಂಗಪ್ಪ ಎಸ್‌ಟಿ, ಡಿವೈಎಸ್‌ಪಿ ಸುಧಾಕರ ಸದಾನಂದ ನಾಯ್ಕ್ ಮಾರ್ಗದರ್ಶನದಲ್ಲಿ ತನಿಖಾಧಿಕಾರಿ ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕಮಂಜಪ್ಪ ಡಿ.ಆರ್ ನೇತೃತ್ವದಲ್ಲಿ ಪತ್ತೆ ಕಾರ್ಯ ಕೈಗೊಂಡು ತನಿಖೆ ನಡೆಸಿದ್ದು, ಪೊಲೀಸ್ ಉಪನಿರೀಕ್ಷಕ ಮಹೇಶ್ ಟಿ.ಎಂ ಮತ್ತು ವಾಸಪ್ಪ ನಾಯ್ಕ್ ಹಾಗೂ ಸಿಬ್ಬಂದಿಗಳಾದ ಸತೀಶ್‌ ಬೆಳ್ಳೆ, ಆನಂದ ಎಸ್‌., ರಿಯಾಝ್‌ ಅಹ್ಮದ್‌, ವಿಶ್ವನಾಥ ಶೆಟ್ಟಿ, ಕಿರಣ ಕೆ., ಶಿವಕುಮಾರ್ ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿಗಳಾದ ದಿನೇಶ್ ಮತ್ತು ನಿತಿನ್ ಕುಮಾರ್ ಸಹಕರಿಸಿರುತ್ತಾರೆ.