ನೀಲಾವರದಲ್ಲಿ ಭಾರೀ ಅಗ್ನಿ ಅವಘಡ: ಪೈನಾಪಲ್ ತೋಟ, ಗಿಡಮರ ಬೆಂಕಿಗಾಹುತಿ!

ಉಡುಪಿ: ಪೈನಾಪಲ್ ತೋಟ ಹಾಗೂ ಗಿಡ ಮರಗಳು ಬೆಂಕಿಗಾಹುತಿಯಾದ ಘಟನೆ ಬ್ರಹ್ಮಾವರ ತಾಲೂಕಿನ ನೀಲಾವರದಲ್ಲಿ ಇಂದು ಮಧ್ಯಾಹ್ನ ಸಂಭವಿಸಿದೆ. ಮಟಪಾಡಿ ಗ್ರಾಮದಿಂದ ನೀಲಾವರ ಕಡೆ ಹೋಗುವ ಮಾರ್ಗದ ಅಕ್ಕ ಪಕ್ಕದ ರಸ್ತೆಗಳಲ್ಲಿ ಬೆಂಕಿ ಅಬ್ಬರ ಜೋರಾಗಿತ್ತು. ಜೆನಿತ್ ಡೈ ಮೇಕರ್ ಇಂಡಸ್ಟ್ರಿ ಸಮೀಪದ ರಸ್ತೆಯ ಅಕ್ಕಪಕ್ಕಗಳಲ್ಲಿ ಬೆಂಕಿ ಕಾಣಿಸಿಕೊಂಡು, ನಂತರ ಹಬ್ಬಲಾರಂಭಿಸಿದೆ. ಪರಿಸರದಲ್ಲಿದ್ದ ಪೈನಾಪಲ್ ತೋಟ ಹಾಗೂ ಒಣಹುಲ್ಲು, ಗಿಡ ಗಂಟಿಗಳು ಸುಟ್ಟು ಕರಕಲಾಗಿವೆ. ಪರಿಸರದ ಅಡಿಕೆ ತೋಟ, ತೆಂಗು, ಹಲಸು ಗಿಡಗಳು ಕೂಡ ಸುಟ್ಟು ಹೋಗಿವೆ .

ಪರಿಸರದಲ್ಲಿ ಸಣ್ಣಪುಟ್ಟ ಕೈಗಾರಿಕೆಗಳಿದ್ದು ಸಕಾಲದಲ್ಲಿ ಕಾರ್ಯಾಚರಣೆ ನಡೆಸಿದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ. ಸ್ಥಳೀಯರು ಮತ್ತು ಅಗ್ನಿಶಾಮಕದಳದ ಕಾರ್ಯಾಚರಣೆಯಿಂದ ಅನಾಹುತ ತಪ್ಪಿದೆ. ಇತ್ತೀಚಿನ ದಿನಗಳಲ್ಲಿ ಬ್ರಹ್ಮಾವರ ಪರಿಸರದಲ್ಲಿ ಪದೇ ಪದೇ ಅಗ್ನಿ ಅವಘಡಗಳು ಸಂಭವಿಸುತ್ತಿದ್ದು ತಾಲೂಕು ಕೇಂದ್ರದಲ್ಲಿ ಶಾಶ್ವತ ಅಗ್ನಿಶಾಮಕ ಠಾಣೆ ಬೇಕೆಂಬ ಬೇಡಿಕೆ ಹೆಚ್ಚಿದೆ. ಯಾವುದೇ ಅವಘಡ ಸಂಭವಿಸಿದರೆ, ಉಡುಪಿ ಇಂದ ಅಗ್ನಿಶಾಮಕ ವಾಹನ ಹೋಗಬೇಕಾಗಿದೆ.ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.