ಬ್ರಹ್ಮಾವರ: ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಬಾಲಕನೊಬ್ಬ ಮೃತಪಟ್ಟ ಘಟನೆ ಇಂದು ಮಧ್ಯಾಹ್ನ ಬ್ರಹ್ಮಾವರ ಆಕಾಶವಾಣಿ ಜಂಕ್ಷನ್ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದಿದೆ.
ಮೃತಪಟ್ಟ ಬಾಲಕನನ್ನು ಶಿವರಾಮ (4) ಎಂದು ಗುರುತಿಸಲಾಗಿದೆ. ಈತ ಆಕಾಶವಾಣಿ ಜಂಕ್ಷನ್ ಬಳಿಯ ಪಿಂಗಾರ ಹೊಟೇಲ್ ಎದುರು ರಸ್ತೆ ದಾಟಲು ನಿಂತಿದ್ದ ಎನ್ನಲಾಗಿದೆ.
ಈ ವೇಳೆ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಮಹಮ್ಮದ್ ಇಸ್ಮಾಯಿಲ್ ಎಂಬುವರು ತನ್ನ ಡಸ್ಟರ್ ಕಾರನ್ನು ಅತೀ ವೇಗವಾಗಿ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಬಾಲಕ ಶಿವರಾಮನಿಗೆ ಡಿಕ್ಕಿ ಹೊಡೆದಿದ್ದಾರೆ.
ಇದರಿಂದ ತೀವ್ರವಾಗಿ ಗಾಯಗೊಂಡ ಬಾಲಕನನ್ನು ಬ್ರಹ್ಮಾವರದ ಮಹೇಶ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಆದರೆ ಬಾಲಕ ಶಿವರಾಮ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.