ಬ್ರಹ್ಮಾವರ: ನೀರು ತರಲು ಹೋದ ಮಹಿಳೆ ಹೊಳೆಯಲ್ಲಿ ಮುಳುಗಿ ಮೃತ್ಯು

ಬ್ರಹ್ಮಾವರ: ಮನೆಯ ಸಮೀಪದ ಹೊಳೆಯಿಂದ ನೀರು ತರಲು ಹೋದ ಮಹಿಳೆಯೊಬ್ಬರು ಆಕಸ್ಮಿಕವಾಗಿ ಕಾಲು ಜಾರಿ ಹೊಳೆಗೆ ಬಿದ್ದು ಮೃತಪಟ್ಟ ಘಟನೆ ಬ್ರಹ್ಮಾವರ ತಾಲೂಕಿನ ಪೆಜಮಂಗೂರು ಗ್ರಾಮದ ಸೂರಾಲು ಸೊಳ್ಳೆಕಟ್ಟು  ಕಂಬಳಗದ್ದೆ ಎಂಬಲ್ಲಿ ನಡೆದಿದೆ.

ಪೆಜಮಂಗೂರು ಗ್ರಾಮದ ಸೂರಾಲು ಸೊಳ್ಳೆಕಟ್ಟು ಕಂಬಳಗದ್ದೆ ಮನೆಯ ನಿವಾಸಿ ಚಂದು ಮರಕಾಲ್ತಿ (60) ಮೃತ ಮಹಿಳೆ.

ಇವರು ಫೆ. 22ರಂದು ಬೆಳಿಗ್ಗೆ 9.15ರ ಸುಮಾರಿಗೆ ಮನೆಯ ಹತ್ತಿರದಲ್ಲಿರುವ ಹೊಳೆಯಿಂದ ನೀರು ತರಲು ಕೊಡಪಾನ ಹಿಡಿದುಕೊಂಡು ಹೋಗಿದ್ದರು. ನೀರು ತೆಗೆಯಲು ಹೊಳೆಗೆ ಇಳಿದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿದ್ದರು.

ಅಲ್ಲೇ ಸಮೀಪ ನಡೆದುಕೊಂಡು ಹೋಗುತ್ತಿದ್ದ ರಾಜೇಶ್ ಎಂಬುವವರು ಗಮನಿಸಿ ಚಂದು ಮರಕಾಲ್ತಿ ಅವರನ್ನು ಮೇಲೆತ್ತಿದ್ದಾರೆ. ಅಷ್ಟೊತ್ತಿಗೆ ಮಹಿಳೆ ನೀರಿನಲ್ಲಿ ಮುಳುಗಿ ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿದರೂ, ಅಲ್ಲಿ ಪರೀಕ್ಷಿಸಿದ ವೈದ್ಯರು ಅದಾಗಲೇ ಚಂದು ಮರಕಾಲ್ತಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.