ಬ್ರಹ್ಮಾವರ: ಇಲ್ಲಿನ ಸಾಹೇಬ್ರಕಟ್ಟೆ ಹೈಸ್ಕೂಲ್ ಸಮೀಪದ ಮಲಸವಾರಿ ದೇವಸ್ಥಾನದ ತಿರುವಿನಲ್ಲಿ ಇಂದು ಬೆಳಿಗ್ಗೆ ನಡೆದ ಭೀಕರ ಅಪಘಾತದಲ್ಲಿ ಓರ್ವ ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಾರು, ಮೀನು ಸಾಗಾಟದ ವಾಹನ ಹಾಗೂ ಬೈಕ್ ಮಧ್ಯೆ ಅಪಘಾತ ನಡೆದಿದೆ. ಘಟನೆಯಲ್ಲಿ ಮೀನು ಸಾಗಾಟದ ಮಿನಿ ಪಿಕಪ್ ಚಾಲಕ, ಮಧುವನ ಅಚ್ಲಾಡಿ ನಿವಾಸಿ ಸುರೇಶ್ ಮರಕಾಲ(40) ಮೃತಪಟ್ಟಿದ್ದಾರೆ. ಸಹ ಸವಾರ ರಾಜು ಮರಕಾಲ(60) ಹಾಗೂ ಬೈಕ್ ಸವಾರ ಶಿರಿಯಾರ ನಿವಾಸಿ ಸುಬ್ರಹ್ಮಣ್ಯ ಕುಲಾಲ್(42) ಎಂಬವರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುರೇಶ್ ಮರಕಾಲ ಮತ್ತು ರಾಜು ಮರಕಾಲ ಮೀನು ಖರೀದಿಸಿ ಮಾರಾಟ ಮಾಡುವ ವೃತ್ತಿ ಮಾಡುತ್ತಿದ್ದು, ಅದೇ ರೀತಿ ಇಂದು ಕೂಡಾ ಮಲ್ಪೆಯಿಂದ ಪಿಕಪ್ ನಲ್ಲಿ ಮೀನು ಹೇರಿಕೊಂಡು ಸಾಹೇಬ್ರಕಟ್ಟೆಗೆ ಬರುತ್ತಿದ್ದರು. ಈ ವೇಳೆ ಸ್ವಿಫ್ಟ್ ಕಾರೊಂದು ಅತೀವೇಗದಲ್ಲಿ ಬಂದು ಬೈಕ್ ಮತ್ತು ಮಿನಿ ಪಿಕಪ್ ಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಅಪಘಾತದ ರಭಸಕ್ಕೆ ಸುರೇಶ್ ಮರಕಾಲ ಮತ್ತು ರಾಜು ಮರಕಾಲ ಪಿಕಪ್ ಒಳಗಡೆ ಸಿಲುಕಿಕೊಂಡಿದ್ದರು. ಬಳಿಕ ಸ್ಥಳೀಯರು ಹರಸಾಹಸಪಟ್ಟು ಅವರನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಿದರು. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಸುರೇಶ್ ಅಷ್ಟರಲ್ಲಿ ಕೊನೆಯುಸಿರೆಳೆದಿದ್ದರು ಎಂದು ತಿಳಿದುಬಂದಿದೆ.
ಅಪಘಾತದ ತೀವ್ರತೆಗೆ ಕಾರು ಮತ್ತು ಮಿನಿ ಪಿಕಪ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.