ಬ್ರಹ್ಮಾವರ: ತಾಲ್ಲೂಕಿನ 52ನೇ ಹೇರೂರು ಗ್ರಾಮದ ಹೇರಂಜೆ ನಿವಾಸಿ ಗೌತಮ್ (21) ಎಂಬುವವರು ಗುರುವಾರ ರಾತ್ರಿಯಿಂದ ಕಾಣೆಯಾಗಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಗೌತಮ್ ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದನು. ಅ. 15ರ ಗುರುವಾರ ಬೆಳಿಗ್ಗೆ 8 ಗಂಟೆಗೆ ಬೈಕ್ ನಲ್ಲಿ ತನ್ನ ತಾಯಿಯನ್ನು ಚಾಂತಾರು ಗೇರು ಬೀಜ ಫ್ಯಾಕ್ಟರಿಗೆ ಕೆಲಸಕ್ಕೆ ಬಿಟ್ಟಿದ್ದನು. ಬಳಿಕ ಬ್ರಹ್ಮಾವರ ಕಡೆಗೆ ಕೆಲಸಕ್ಕೆ ಹೋಗುವುದಾಗಿ ಹೇಳಿದ್ದನು. ಮನೆಯವರು ರಾತ್ರಿ 8 ಗಂಟೆಗೆ ಕರೆ ಮಾಡಿದಾಗ ತಾನು ಬ್ರಹ್ಮಾವರ ವಾರಂಬಳ್ಳಿಯ ಐಸೆಂಟ್ಸ್ನಲ್ಲಿ ಐಪಿಎಲ್ ಕ್ರಿಕೆಟ್ ಮ್ಯಾಚ್ ನೋಡುತ್ತಿದ್ದು, ಮನೆಗೆ ಬರುವುದು ತಡವಾಗುತ್ತದೆಂದು ಹೇಳಿದ್ದನು. ಆದರೆ ಗೌತಮ್ ಬೆಳಿಗ್ಗೆ ಆದರೂ ಮನೆಗೆ ಬರಲಿಲ್ಲ.
ಮನೆಯವರು ಅ. 16 ರಂದು ಗೌತಮ್ ಗಾಗಿ ಹುಡುಕಾಟ ನಡೆಸಿದ್ದು, ಮನೆಯವರಿಗೆ ಬಾರ್ಕೂರು ಸೇತುವೆ ಮೇಲೆ ಆತನ ಮೋಟಾರ್ ಸೈಕಲ್, ಕೀ ಸಮೇತ, ಹೆಲ್ಮೆಟ್, ಜಾಕೆಟ್ ಪತ್ತೆಯಾಗಿದೆ. ಆದರೆ ಆತನ ಸುಳಿವು ಪತ್ತೆಯಾಗಿಲ್ಲ. ತಂದೆ ದಾಮೋದರ ದೇಶ್ ಭಂಡಾರಿ ನೀಡಿದ ದೂರಿನಂತೆ ಬ್ರಹ್ಮಾವರ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.












