ಬ್ರಹ್ಮಾವರ: ಕೆರೆಗೆ ಸ್ನಾನ ಮಾಡಲು ಹೋದ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬ್ರಹ್ಮಾವರ ತಾಲೂಕಿನ ಪೇತ್ರಿ ಮದಗ ಎಂಬಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಮೃತರನ್ನು ಪೇತ್ರಿ ಮದಗ ಸಮೀಪದ ನಿವಾಸಿ 55 ವರ್ಷದ ಪಾಂಡು ನಾಯ್ಕ್ ಎಂದು ಗುರುತಿಸಲಾಗಿದೆ. ಅವರು ಇಂದು ಮಧ್ಯಾಹ್ನ ಪೇತ್ರಿ ಮದಗ ಕೆರೆಗೆ ಸ್ನಾನ ಮಾಡಲು ಹೋಗಿದ್ದಾರೆ. ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ.
ಕೆರೆಯಲ್ಲಿ ಸಾಕಷ್ಟು ಹೂಳು ತುಂಬಿದ್ದರಿಂದ ಸ್ಥಳೀಯರು ಯಾರೂ ನೀರಿಗೆ ಇಳಿಯಲಿಲ್ಲ. ಸಂಜೆ 5 ಗಂಟೆ ಸುಮಾರಿಗೆ ಮುಳುಗು ತಜ್ಞ ಐಶ್ವರ್ ಮಲ್ಪೆ ಅವರಿಗೆ ಕರೆ ಬಂದಿದ್ದು, ಅದರಂತೆ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಈಶ್ವರ್ ಮಲ್ಪೆ ಅಗ್ನಿಶಾಮಕ ದಳದ ಸಿಬ್ಬಂದಿಯ ಜತೆಗೂಡಿ ಸುಮಾರು ಸಂಜೆ 5.30 ರ ವೇಳೆ ಮೃತದೇಹ ಮೇಲೆತ್ತಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.