ಬ್ರಹ್ಮಶ್ರೀ ನಾರಾಯಣ ಗುರುಗಳ ಪಠ್ಯ ಸಮಾಜ ವಿಜ್ಞಾನ ಪುಸ್ತಕದಲ್ಲಿ ಮರು ಸೇರ್ಪಡೆ

ಉಡುಪಿ: ಬ್ರಹ್ಮಶ್ರೀ ನಾರಾಯಣ ಗುರುಗಳ ಪಠ್ಯವನ್ನು ಕನ್ನಡ ಭಾಷೆಯಲ್ಲಿ ಅಳವಡಿಸಿದ್ದು, ಅದರ ಬದಲು ಸಮಾಜ ವಿಜ್ಞಾನ ವಿಷಯದ ಪಠ್ಯದಲ್ಲಿ ಅಳವಡಿಸಲು ಸಚಿವ ಸುನಿಲ್ ಕುಮಾರ್ ಅವರ ಕೋರಿಕೆಯ ಹಿನ್ನೆಲೆಯಲ್ಲಿ ಗುರುಗಳ ಕುರಿತಾದ ಪಾಠವನ್ನು ಸಮಾಜ ವಿಜ್ಞಾನ ವಿಷಯದ ಪಠ್ಯ ಪುಸ್ತಕದಲ್ಲಿ ತಕ್ಷಣ ಅಳವಡಿಸಲು ಸರ್ಕಾರಿ ಆದೇಶ ಹೊರಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.

ಸರಕಾರದ ಈ ನಿರ್ಧಾರವನ್ನು ಸ್ವಾಗತಿಸಿರುವ ಬಿಲ್ಲವ ಸಮಾಜವು ಅಧಿಕೃತ ಆದೇಶ ಬಂದ ಕೂಡಲೇ ಈಗಾಗಲೇ ಕರೆ ನೀಡಲಾದ ಪ್ರತಿಭಟನಾ ಸಭೆಯನ್ನು ಕೈಬಿಡುವ ನಿರ್ಧಾರ ಮಾಡಲಾಗುವುದು ಎಂದು ತಿಳಿಸಿದೆ. ಗುರುಗಳ ಪಠ್ಯ ಸೇರ್ಪಡೆಗೆ ಶಿಕ್ಷಣ ಸಚಿವರ ಮನವೊಲಿಸಿದ ಸಚಿವ ಸುನಿಲ್ ಕುಮಾರ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಇವರಿಗೆ ಬ್ರಹ್ಮಶ್ರೀ ನಾರಾಯಣಗುರು ವಿಚಾರ ವೇದಿಕೆಯು ಕೃತಜ್ಞತೆಗಳನ್ನು ಸಲ್ಲಿಸಿದೆ.