ಮುಂಬೈ: ಬ್ರಹ್ಮಕುಮಾರಿ ಮುಖ್ಯ ಆಡಳಿತಾಧಿಕಾರಿಣಿಯಾಗಿದ್ದ ದಾದಿ ಹೃದಯಮೋಹಿನಿಯವರು ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದಾರೆ. ಮುಂಬೈನ ಗಾವದೇವಿ ಸೇವಾಕೇಂದ್ರದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಅವರು ಇಂದು ಮುಂಜಾನೆ ಕೊನೆಯುಸಿರೆಳೆದರು.
ಮಹಾತಪಸ್ವಿನಿ ರಾಜಯೋಗಿನಿ ದಾದಿ ಹೃದಯಮೋಹಿನಿಜಿಯವರು 8 ವರ್ಷದವರಿದ್ದಾಗ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸ್ಥಾಪನೆಯ ಸಮಯದಲ್ಲಿ ಸಂಪರ್ಕಕ್ಕೆ ಬಂದರು. 1928 ರಲ್ಲಿ ಸಿಂಧಪ್ರಾಂತ್ಯದ ಹೈದರಾಬಾದಿನಲ್ಲಿ ಇವರ ಜನ್ಮ ಆಯಿತು. ಇವರ ಲೌಕಿಕ ಹೆಸರು ಶೋಭ. ಓಂ ಮಂಡಳಿಗೆ ಬಂದಾಗ ಪ್ರಜಾಪಿತ ಬ್ರಹ್ಮಾರವರು ‘ಗುಲ್ಜಾರ್’ ಎಂದು ನಾಮಕರಣ ಮಾಡಿದರು. ಶಿವ ಪರಮಾತ್ಮನಿಂದ ಪಡೆದ ಹೆಸರು ಹೃದಯಮೋಹಿನಿ.
ನಂತರ ಅವರು 14 ವರ್ಷಗಳ ಕಾಲ ಆಧ್ಯಾತ್ಮಿಕ ಜ್ಞಾನ ಮತ್ತು ರಾಜಯೋಗದಲ್ಲಿ ಆಳವಾದ ತರಬೇತಿ ಪಡೆದರು. ಇದಾದ ಮೇಲೆ ದಾದೀಜಿಯವರು ಭಾರತದ ವಿವಿಧ ಸ್ಥಳಗಳಿಗೆ ಭೇಟಿ ನೀಡಿ, ಆಂತರಿಕ ಶಾಂತಿ ನೀಡುವ ಅನೇಕ ರಾಜಯೋಗದ ಕೇಂದ್ರಗಳನ್ನು ತೆರೆದರು. ಆಸ್ಟ್ರೇಲಿಯಾ, ಜಪಾನ್, ನ್ಯೂಜಿಲ್ಯಾಂಡ್, ಫಿಲಿಫೈನ್ಸ್, ಹಾಂಗ್ಕಾಂಗ್, ಸಿಂಗಾಪುರ, ಮಲೇಶಿಯಾ, ಇಂಡೋನೇಶಿಯಾ, ಶ್ರೀಲಂಕಾ, ಯು.ಎಸ್.ಎ., ಬ್ರಿಜಿಲ್, ಮೆಕ್ಸಿಕೊ, ಕೆನಡಾ, ಯು.ಕೆ., ಜರ್ಮನಿ, ಫ್ರಾನ್ಸ್ಸ್, ಹಾಲೆಂಡ್, ಪೋಲೆಂಡ್, ರಶಿಯಾ, ಆಫ್ರಿಕಾ ಮುಂತಾದ ಅನೇಕ ದೇಶಗಳ ಆಮಂತ್ರಣದ ಮೇರೆಗೆ ದಾದೀಜಿಯವರು ರಾಜಯೋಗ, ಅಧ್ಯಾತ್ಮ, ತತ್ವಶಾಸ್ತ್ರ, ಬದುಕುವ ಕಲೆ ಮುಂತಾದ ವಿಷಯದ ಬಗ್ಗೆ ಹಲವಾರು ಪ್ರವಚನಗಳನ್ನು ನೀಡಿದ್ದರು.
ಅವರು ಮಾಡಿದ ಅಪಾರ ಸೇವೆಗೆ, ವಿಜಯನಗರದ ಕೃಷ್ಣದೇವರಾಯ ವಿಶ್ವ ವಿದ್ಯಾಲಯವು 2019 ರಲ್ಲಿ ಗೌರವ ಡಾಕ್ಟರೇಟ್ ಪದವಿಯನ್ನು ಕೊಟ್ಟು ಸನ್ಮಾನಿಸಿದೆ. ಮಾರ್ಚ2021, ರಲ್ಲಿ ನಾರ್ಥ ಒಡೀಸಾ ವಿಶ್ವವಿದ್ಯಾಲಯವು (ಬಾದಿಪಾಡ) ಗೌರವ ಡಾಕ್ಟರೇಟ್ ಪದವಿ ನೀಡಿದೆ.