ಉಡುಪಿ: ಕನ್ನರ್ಪಾಡಿ ಶ್ರೀ ಜಯದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಏ.10 ರ ತನಕ ನಡೆಯುವ ಬ್ರಹ್ಮಕುಂಭಾಭಿಷೇಕ ಕಾರ್ಯಕ್ರಮದ ಪ್ರಯುಕ್ತ ಗುರುವಾರ ಜೋಡುಕಟ್ಟೆಯಿಂದ ಹಸಿರು ಹೊರೆಕಾಣಿಕೆ ಮೆರವಣಿಗೆವು ಅಮ್ಮನ ಸನ್ನಿಧಾನಕ್ಕೆ ಸಮರ್ಪಿಸಲಾಯಿತು.
ಶ್ರೀ ಕ್ಷೇತ್ರದ ಆಡಳಿತಾಧಿಕಾರಿ ಡಾ. ರೋಶನ್ ಶೆಟ್ಟಿ ಮೆರವಣಿಗೆಗೆ ಚಾಲನೆ ನೀಡಿದ್ದ, ಊರ ಪರವೂರ ಭಕ್ತರು ವಾಹನಗಳಲ್ಲಿ ಅಕ್ಕಿ, ಬೇಳೆಕಾಳು, ಸಕ್ಕರೆ, ಬೆಲ್ಲ, ತುಪ್ಪ, ತೆಂಗಿನಕಾಯಿ ಅರ್ಪಿಸಿದರು.
ಶ್ರೀ ಕ್ಷೇತ್ರದಲ್ಲಿ ಪ್ರತಿದಿನ ಧಾರ್ಮಿಕ ಕಾರ್ಯಕ್ರಮ, ಹಾಲು ಪಾಯಸ ಸಹಿತ ಮಹಾ ಅನ್ನಸಂತರ್ಪಣೆ ನೆರವೇರಲಿದ್ದು, ಕಾಳಿಂಗಮರ್ಧನ ಕೃಷ್ಣ, ಈಶ್ವರ, ಹನುಮಂತ, ಅಯ್ಯಪ್ಪ, ಋಷಿ, ಸಿಂಹ ವಾಹಿನಿ ದೇವಿ, ರುಂಡ ಮಾಲಿನಿ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು.
ಮಹಿಳಾ ತಂಡದ ಚಂಡೆವಾದನ, ಚಕ್ರತಾಳ ಹಿಡಿದ ಬಾಲಕಿಯರ ಕುಣಿತ, ಸಾಂಪ್ರದಾಯಿಕ ಡೋಲು ವಾದನವು ಮೆರವಣಿಗೆಯ ಮೆರಗು ಹೆಚ್ಚಿಸಿದವು.
ದೇವಳದ ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ಕೆ. ಕೃಷ್ಣಮೂರ್ತಿ ಆಚಾರ್ಯ, ನಗರಸಭೆ ಸದಸ್ಯ ಅಮೃತಾ ಕೃಷ್ಣಮೂರ್ತಿ, ಅರ್ಚಕ ಗುರುರಾಜ ಉಪಾಧ್ಯಾಯ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎನ್. ಮುರುಳೀಧರ ಬಲ್ಲಾಳ್, ಪ್ರಧಾನ ಕಾರ್ಯದರ್ಶಿ ಸಂಜೀವ ಎಂ., ನಾರಾಯಣ ರಾವ್, ಉಪಾಧ್ಯಕ್ಷ ನವೀನ್ ಶೆಟ್ಟಿ, ನಿರುಪಮಾ ಶೆಟ್ಟಿ, ಶ್ರೀಶ ತಂತ್ರಿ, ಜಯದುರ್ಗಾ ಪರಮೇಶ್ವರಿ ಯುವಕ ಮಂಡಳಿಯ ಉಮಾನಾಥ ಶೇರಿಗಾರ್ ಉಪಸ್ಥಿತರಿದ್ದರು.