ಉಡುಪಿ: ಬ್ರಹ್ಮಾಕುಮಾರೀಸ್ ಸಂಸ್ಥೆಯ ಉಡುಪಿ ಮತ್ತು ಮಣಿಪಾಲ ಶಾಖೆಯಲ್ಲಿ ಇದೇ ಬರುವ ಆ.9ರಂದು ಸಂಜೆ 6ಗಂಟೆಗೆ ಸಾರ್ವಜನಿಕರಿಗಾಗಿ ವಿಶೇಷ ರಕ್ಷಾಬಂಧನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಬ್ರಹ್ಮಾಕುಮಾರೀಸ್ ಸಂಸ್ಥೆಯ ಮಣಿಪಾಲ ಶಾಖೆಯ ಸಂಚಾಲಕಿ ಬಿಕೆ ಸೌರಭ ತಿಳಿಸಿದರು.
ಉಡುಪಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಕ್ಷಾಬಂಧನವು ವಿಶ್ವ ಭ್ರಾತೃತ್ವ ಮತ್ತು ಕೋಮು ಸೌಹಾರ್ದತೆಯ ಪವಿತ್ರ ಹಬ್ಬ. ರಾಖಿ ಕೇವಲ ಸಹೋದರ-ಸಹೋದರಿಯ ನಡುವಿನ ಹಬ್ಬವಲ್ಲ. ಇದು ಆತ್ಮ ಶುದ್ಧತೆಯ ಬಾಂಧವ್ಯವನ್ನು ಪರಮಾತ್ಮನ ಜೊತೆ ಬಿಗಿಯಾಗಿಸುವ ಪವಿತ್ರ ಸಂಕೇತವಾಗಿದೆ. ಇಂದಿನ ಅನಿಶ್ಚಿತ ಕಾಲದಲ್ಲಿ, ರಾಖಿಬಂಧನವು ಮಾನವೀಯ ಮೌಲ್ಯಗಳನ್ನು ಜೀವಿತದಲ್ಲಿ ಅಳವಡಿಸಿಕೊಂಡು ಆತ್ಮಶಕ್ತಿಯನ್ನು ಪೋಷಿಸುವ ನೆನಪಿನ ದಿನವಾಗಿದೆ ಎಂದರು.
ರಾಖಿ ಕೇವಲ ವೈಯಕ್ತಿಕ ಸಂಬಂಧಗಳಲ್ಲದೆ, ಜಾತಿ, ಧರ್ಮ, ಲಿಂಗದ ಮೇರುಗುಗಳನ್ನು ಮೀರಿ ವಿಶ್ವಮಾನವೀಯ ಭ್ರಾತೃತ್ವ ಮತ್ತು ಸೌಹಾರ್ದತೆಗೆ ಸಂಕೇತವಾಗಿಯೂ ಆಚರಿಸಬಹುದು. ಬ್ರಹ್ಮಾಕುಮಾರೀಸ್ ತಂಡವು ಈ ವಾರದವರೆಗೆ ಉಡುಪಿ-ಮಣಿಪಾಲದ ವಿವಿಧ ಶಾಲೆಗಳು, ಕಾಲೇಜುಗಳು, ಆಸ್ಪತ್ರೆಗಳು, ಸರ್ಕಾರಿ ಕಚೇರಿಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ರಾಖಿ ಕಾರ್ಯಕ್ರಮಗಳನ್ನು ನಡೆಸಲಿದ್ದು, ಶಾಂತಿ, ಮೌಲ್ಯಾಧಾರಿತ ಜೀವನ ಮತ್ತು ಸೌಹಾರ್ದತೆಯ ಸಂದೇಶವನ್ನು ಪಸರಿಸಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಉಡುಪಿ ಶಾಖೆಯ ಸಂಚಾಲಕಿ ಸುಮ, ಮಣಿಪಾಲ ಶಾಖೆಯ ಸಹಸಂಚಾಲಕಿ ಸುಜಾತ ಉಪಸ್ಥಿತರಿದ್ದರು.












