ಮಲ್ಪೆ: ಕರಾವಳಿಯಲ್ಲಿ ಮೀನುಗಾರಿಕಾ ಋತು ವಿದ್ಯುಕ್ತವಾಗಿ ಆರಂಭವಾಗಿದ್ದು, ಮಲ್ಪೆಯಲ್ಲಿ ಮೀನುಗಾರರ ಬಲೆಗೆ ಬೊಂಡಾಸ್ ಮೀನುಗಳು ಬಿದ್ದಿವೆ. ಗುರುವಾರ ಮಲ್ಪೆಯ ಬಂದರಿನ ತುಂಬೆಲ್ಲ ಬೊಂಡಾಸ್ ಮೀನು ರಾಶಿ ಹಾಕಿರುವ ಬಗ್ಗೆ ವರದಿಯಾಗಿದೆ.
ಆಳಸಮುದ್ರಕ್ಕೆ ತೆರಳಿದ್ದ ಮೀನುಗಾರಿಕಾ ಬೋಟ್ ಗಳ ಬಲೆಗೆ ಬೊಂಡಾಸ್ ಮೀನು ಬಿದ್ದಿದೆ. ಪ್ರತಿ ಬೋಟ್‌ಗೂ ತಲಾ 5 ರಿಂದ 6 ಟನ್‌ನಷ್ಟು ಬೊಂಡಾಸ್ ಲಭ್ಯವಾಗಿದೆ ಎಂದು ಹೇಳಲಾಗಿದೆ. ಆದರೆ ಮಾರುಕಟ್ಟೆ ಬೇಡಿಕೆಗಿಂತ ಹಲವು ಪಟ್ಟು ಹೆಚ್ಚು ಬೊಂಡಾಸ್ ಪೂರೈಕೆಯಾಗಿದ್ದರಿಂದ ಬೆಲೆಯಲ್ಲಿ ಕುಸಿತ ಕಂಡಿದೆ ಎನ್ನಲಾಗಿದೆ.
ದೊಡ್ಡ ಗಾತ್ರದ (ಎ ಗ್ರೇಡ್) ಬೊಂಡಾಸ್ ಕೆ.ಜಿಗೆ 400 ರಿಂದ 500 ರೂಗೆ ಮಾರಾಟವಾಗುತ್ತದೆ. ಗುರುವಾರದಂದು ಕೆ.ಜಿಗೆ 80 ರಿಂದ 100 ರೂ ನಲ್ಲಿ ಮಾರಾಟವಾಗಿದೆ ಎನ್ನಲಾಗಿದೆ. ಬೊಂಡಾಸ್ ಮೀನುಗಳಿಗೆ ಗೋವಾ, ಗುಜರಾತ್ ಸೇರಿದಂತೆ ಹೊರ ರಾಜ್ಯಗಳಿಂದಬೇಡಿಕೆ ಹೆಚ್ಚು. ಸ್ಥಳೀಯ ಜನರು ಬೊಂಡಾಸ್ ಮೀನುಗಳನ್ನು ಅಷ್ಟೊಂದು ಇಷ್ಟಪಡುವುದಿಲ್ಲವಾದ್ದರಿಂದ ಬೇಡಿಕೆ ಕುಸಿದಿದ್ದು, ಹಾಕಿರುವ ಬಂಡವಾಳ ಹಿಂತಿರುಗಿ ಬರುವುದೇ ಇಲ್ಲವೋ ಎನ್ನುವ ನಿರೀಕ್ಷೆಯಲ್ಲಿ ಮೀನುಗಾರರು ಇದ್ದಾರೆ.












