ಹಿರಿಯಡಕ: ಬಾವಿಗೆ ಬಿದ್ದ ಕಾಡು ಕೋಣವೊಂದನ್ನು ಕಾರ್ಯಾಚರಣೆ ಮೂಲಕ ರಕ್ಷಣೆ ಮಾಡಿದ ಘಟನೆ ಬೊಮ್ಮಾರಬೆಟ್ಟು ಗ್ರಾಮದ ಪಂಚನಬೆಟ್ಟು ಎಂಬಲ್ಲಿ ಶುಕ್ರವಾರ ನಡೆದಿದೆ.
ಪಂಚನಬೆಟ್ಟು ಸಮೀಪದ ಕಾಡಿನಲ್ಲಿರುವ ಪಾಳುಬಿದ್ದ ಬಾವಿಯಲ್ಲಿ ಇಂದು ಬೆಳಿಗ್ಗೆ ಕಾಡುಕೋಣ ಪತ್ತೆಯಾಗಿದೆ. ಆಹಾರ ಹುಡುಕಿಕೊಂಡು ಬಂದ ಕಾಡುಕೋಣ ಆಯತಪ್ಪಿ ಪಾಳುಬಿದ್ದ ಬಾವಿಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.
ಕಾಡುಕೋಣ ಬಾವಿಗೆ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿದರು. ಬಳಿಕ ಜೇಸಿಬಿ ತರಿಸಿ ಮಣ್ಣು ಅಗೆದು ಕಾಡುಕೋಣ ಮೇಲೆ ಬರಲು ದಾರಿ ಮಾಡಿಕೊಡಲಾಯಿತು.
ಬಾವಿಗೆ ಬಿದ್ದು ಮೇಲೆ ಬರಲು ಆಗದೆ ಒದ್ದಾಡಿದ ಕಾಡುಕೋಣವು, ಮಣ್ಣು ಅಗೆದು ದಾರಿ ಮಾಡಿಕೊಡುತ್ತಿದ್ದಂತೆ ಬಾವಿಯಿಂದ ಮೇಲೆ ಬಂದು ಕಾಡಿನೊಳಗೆ ಸೇರಿಕೊಂಡಿತು.
ರಕ್ಷಣಾ ಕಾರ್ಯಾಚರಣೆಯಲ್ಲಿ ಸ್ಥಳೀಯರು ಅರಣ್ಯ ಇಲಾಖೆಯವರಿಗೆ ಸಹಕರಿಸಿದರು.