ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ಸಂಪುಟದಲ್ಲಿ ಉಡುಪಿ ಜಿಲ್ಲೆಗೆ ಜಾಕ್ ಪಾಟ್ ಹೊಡೆದಿದ್ದು, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಅವರಿಗೆ ಮಂತ್ರಿ ಸ್ಥಾನ ಲಭಿಸಿದೆ.
ಕೋಟ ಮತ್ತು ಸುನಿಲ್ ಇಬ್ಬರೂ ಆರ್ ಎಸ್ಎಸ್ ನೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ. ರಾಜಕೀಯದಲ್ಲಿ ಕ್ಲೀನ್ ಇಮೇಜ್ ಹೊಂದಿರುವ ನಾಯಕರಾಗಿದ್ದಾರೆ. ಇಬ್ಬರೂ ಬಿಲ್ಲವ ಸಮುದಾಯಕ್ಕೆ ಸೇರಿದವರಾಗಿದ್ದು, ಸಹಜವಾಗಿಯೇ ಸಮುದಾಯದ ಶೀರಕ್ಷೆಯೂ ಇವರ ಮೇಲಿದೆ. ಈ ಎಲ್ಲ ಕಾರಣಗಳಿಂದ ಒಂದೇ ಜಿಲ್ಲೆಯವರಾಗಿದ್ದರೂ ಇಬ್ಬರಿಗೂ ಮಂತ್ರಿ ಸ್ಥಾನ ಸಿಕ್ಕಿದೆ ಎಂದು ಹೇಳಲಾಗುತ್ತಿದೆ.
ಸುನಿಲ್ ಕುಮಾರ್ ಕಾರ್ಕಳ ವಿಧಾನ ಸಭಾಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ವಿಧಾನಸಭಾ ಮುಖ್ಯ ಸಚೇತಕರೂ ಆಗಿದ್ದರು.
ವಿಧಾನ ಪರಿಷತ್ ಸದಸ್ಯರಾಗಿ ಮೂರು ಬಾರಿ ಆಯ್ಕೆಯಾಗಿರುವ ಕೋಟ ಶ್ರೀನಿವಾಸ ಪೂಜಾರಿ, 2 ಬಾರಿ ಸಚಿವರಾಗಿ, ವಿರೋಧ ಪಕ್ಷ ನಾಯಕರಾಗಿ ಸರಳ, ಪ್ರಾಮಾಣಿಕ ಸಚಿವ ಎಂಬ ಜನಮನ್ನಣೆ ಗಳಿಸಿದ್ದಾರೆ.












