ಮಂಗಳೂರು: ಮಂಗಳೂರಿನ ಬಜ್ಪೆಯಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬ್ಯಾಗ್‌ವೊಂದರಲ್ಲಿ ಸ್ಫೋಟಕ ಇರಿಸಿದ್ದ ಪ್ರಕರಣದ ಪ್ರಮುಖ ಆರೋಪಿ ಮಣಿಪಾಲದ ಆದಿತ್ಯ ರಾವ್, ಮಂಗಳೂರಿನ ಹೊಟೇಲ್‌ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ವಿಷಯ ಬಹಿರಂಗವಾಗಿದೆ. ಬಲ್ಮಠದ ಹೋಟೆಲ್‌ವೊಂದರಲ್ಲಿ ಒಂದು ತಿಂಗಳು ಕೆಲಸ ಮಾಡಿದ್ದಾನೆ. ಹೋಟೆಲ್‌ನ ಬಿಲ್ಲಿಂಗ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಆರೋಪಿ, ಅಚ್ಚುಕಟ್ಟಾಗಿಯೇ ಕೆಲಸ ನಿರ್ವಹಿಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ಆರೋಪಿ ತಲೆಗೆ ಸದಾ ಕ್ಯಾಪ್ ಧರಿಸುತ್ತಿದ್ದ. ಯಾರ ಜತೆಗೂ ಮಾತುಕತೆಯಲ್ಲಿ ತೊಡಗುತ್ತಿರಲಿಲ್ಲ. ತಂತ್ರಜ್ಞಾನದ ಬಗ್ಗೆ ಬಹಳಷ್ಟು ತಿಳಿದುಕೊಂಡಿದ್ದ. ಅಲ್ಲದೆ, ಆನ್‌ಲೈನ್ ಶಾಪಿಂಗ್‌ವೊಂದರಿಂದ ಬಿಳಿ ಬಣ್ಣದ ಹುಡಿಯೊಂದನ್ನು ತರಿಸುತ್ತಿದ್ದ. ಆತ ಹೋಟೇಲ್‌ನಲ್ಲಿ ಕುಳಿತುಕೊಳ್ಳುತ್ತಿದ್ದ ಕುರ್ಚಿಯ ಬಳಿ ಆಗಾಗ ಪೌಂಡರ್‌ನ್ನೇ ಹೋಲುವ ಪುಡಿ ಚೆಲ್ಲಿರುತ್ತಿದ್ದವು ಎಂದು ಆತನ ಜತೆ ಕೆಲಸ ಮಾಡಿಕೊಂಡಿದ್ದ ಕೆಲವರು ತಿಳಿಸಿದ್ದಾರೆ.
ಆರೋಪಿಯು ಕೆಲಸಕ್ಕೆ ಬರುವಾಗ ಬ್ಯಾಗ್‌ವೊಂದನ್ನು ಸದಾ ಹಿಡಿಕೊಂಡು ಬರುತ್ತಿದ್ದ. ಹೊಟೇಲ್‌ನ ಮೊದಲನೆ ಮಹಡಿಯಲ್ಲಿರುವ ಬಿಲ್ಲಿಂಗ್ ವಿಭಾಗದಲ್ಲೇ ತನ್ನ ಕುರ್ಚಿಯ ಬಳಿ ಆ ಬ್ಯಾಗ್‌ನ್ನು ಇಟ್ಟುಕೊಂಡಿರುತ್ತಿದ್ದ ಎಂಬ ಮಾಹಿತಿಯೂ ಲಭಿಸಿದೆ.