ಕ್ಯಾನ್ಸರ್ ವಿರುದ್ಧ ಗೆದ್ದು ಬಂದ ಬಾಲಿವುಡ್ ನಟ ಸಂಜಯ್ ದತ್

ಮುಂಬೈ: ಬಾಲಿವುಡ್ ನಟ ಸಂಜಯ್ ದತ್ ಅವರು ಶ್ವಾಸಕೋಸದ ಕ್ಯಾನ್ಸರ್​ ನಿಂದ ಸಂಪೂರ್ಣ ಚೇತರಿಸಿಕೊಂಡಿದ್ದಾರೆ.

61 ವರ್ಷದ ನಟ ಸಂಜಯ್​ ದತ್​​ ಶ್ವಾಸಕೋಶದ ಕ್ಯಾನ್ಸರ್​ನಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಮುಂಬೈನ ಕೋಕಿಲಾಬೆನ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಇದೀಗ ಅವರು ಮಹಾಮಾರಿ ರೋಗದಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ತಿಳಿದುಬಂದಿದೆ.

ಇಂದು ಸಂಜಯ್​ ದತ್​​ ಮಕ್ಕಳಾದ ಶಹ್ರಾನ್​ ಹಾಗೂ ಇಕ್ರಾ 10ನೇ ವರ್ಷಕ್ಕೆ ಕಾಲಿಡುತ್ತಿದ್ದು, ಈ ಸಂದರ್ಭದಲ್ಲಿ ತಾವು ಕ್ಯಾನ್ಸರ್​ ವಿರುದ್ಧ ಗೆಲುವು ಸಾಧಿಸಿರುವುದಾಗಿ ಸಂಜಯ್​ ದತ್​​ ತಿಳಿಸಿದ್ದಾರೆ.

ಈ ಬಗ್ಗೆ ತಮ್ಮ ಟ್ವೀಟರ್​​ ಅಕೌಂಟ್​​ನಲ್ಲಿ ಮಾಹಿತಿ ಹಂಚಿಕೊಂಡಿರುವ ನಟ, ಕಳೆದ ಕೆಲ ವಾರಗಳು ನನಗೆ ಹಾಗೂ ನನ್ನ ಕುಟುಂಬಕ್ಕೆ ತುಂಬಾ ಕಠಿಣ ದಿನಗಳಾಗಿದ್ದವು. ಆದರೆ ದೇವರು ಅದರ ವಿರುದ್ಧ ಹೋರಾಡುವ ಸಾಮರ್ಥ್ಯ ನನಗೆ ನೀಡಿ ಅದರಲ್ಲಿ ಗೆಲುವು ಸಾಧಿಸಿದ್ದೇನೆ. ನನ್ನ ಮಕ್ಕಳ ಹುಟ್ಟುಹಬ್ಬದ ಸಂದರ್ಭದಲ್ಲಿ ಈ ಸಂತೋಷದ ಸುದ್ದಿ ತಿಳಿಸಲು ನಾನು ಇಷ್ಟಪಡುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.