ಮುಂಬೈ: ಬಾಲಿವುಡ್ ನಟ ಸಂಜಯ್ ದತ್ ಅವರು ಶ್ವಾಸಕೋಸದ ಕ್ಯಾನ್ಸರ್ ನಿಂದ ಸಂಪೂರ್ಣ ಚೇತರಿಸಿಕೊಂಡಿದ್ದಾರೆ.
61 ವರ್ಷದ ನಟ ಸಂಜಯ್ ದತ್ ಶ್ವಾಸಕೋಶದ ಕ್ಯಾನ್ಸರ್ನಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಇದೀಗ ಅವರು ಮಹಾಮಾರಿ ರೋಗದಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ತಿಳಿದುಬಂದಿದೆ.
ಇಂದು ಸಂಜಯ್ ದತ್ ಮಕ್ಕಳಾದ ಶಹ್ರಾನ್ ಹಾಗೂ ಇಕ್ರಾ 10ನೇ ವರ್ಷಕ್ಕೆ ಕಾಲಿಡುತ್ತಿದ್ದು, ಈ ಸಂದರ್ಭದಲ್ಲಿ ತಾವು ಕ್ಯಾನ್ಸರ್ ವಿರುದ್ಧ ಗೆಲುವು ಸಾಧಿಸಿರುವುದಾಗಿ ಸಂಜಯ್ ದತ್ ತಿಳಿಸಿದ್ದಾರೆ.
ಈ ಬಗ್ಗೆ ತಮ್ಮ ಟ್ವೀಟರ್ ಅಕೌಂಟ್ನಲ್ಲಿ ಮಾಹಿತಿ ಹಂಚಿಕೊಂಡಿರುವ ನಟ, ಕಳೆದ ಕೆಲ ವಾರಗಳು ನನಗೆ ಹಾಗೂ ನನ್ನ ಕುಟುಂಬಕ್ಕೆ ತುಂಬಾ ಕಠಿಣ ದಿನಗಳಾಗಿದ್ದವು. ಆದರೆ ದೇವರು ಅದರ ವಿರುದ್ಧ ಹೋರಾಡುವ ಸಾಮರ್ಥ್ಯ ನನಗೆ ನೀಡಿ ಅದರಲ್ಲಿ ಗೆಲುವು ಸಾಧಿಸಿದ್ದೇನೆ. ನನ್ನ ಮಕ್ಕಳ ಹುಟ್ಟುಹಬ್ಬದ ಸಂದರ್ಭದಲ್ಲಿ ಈ ಸಂತೋಷದ ಸುದ್ದಿ ತಿಳಿಸಲು ನಾನು ಇಷ್ಟಪಡುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.












