ಮಂಗಳೂರು: ಕರಾವಳಿಯ ಸಂಗೀತಾಸಕ್ತರಿಗೆ ಮತ್ತೊಂದು ರಸದೌತಣ. ಮೂರು ಆವೃತ್ತಿಯಲ್ಲಿ ಯಶಸ್ವಿಯಾಗಿದ್ದ `ಬೋಲಾವ ವಿಠಲ’ ಸಂಗೀತ ಕಾರ್ಯಕ್ರಮವು ಜುಲೈ 24 ರಂದು ಸಂಜೆ 5.00 ರಿಂದ ಪುರಭವನದಲ್ಲಿ ನಡೆಯಲಿದೆ. ಹಿಂದೂಸ್ತಾನಿ ಹಾಗೂ ಕರ್ಣಾಟಕ ಸಂಗೀತದ ಶ್ರೇಷ್ಠ ಕಲಾವಿದರಾದ ಹುಬ್ಬಳ್ಳಿಯ ಪಂಡಿತ್ ವೆಂಕಟೇಶ್‌ಕುಮಾರ್, ದೇವಕಿ ಪಂಡಿತ್ ಅವರಿಂದ ಅಭಂಗ ರೂಪದಲ್ಲಿ ಹಾಡುಗಾರಿಕೆ ನಡೆಯಲಿದೆ.
ಬೋಲಾವ ವಿಠಲ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಚಿಸುವ ಕಲಾಸಕ್ತರು ಪಾಸ್ ಅನ್ನು ಕೋಡಿಯಾಲ್‌ಬೈಲ್‌ನಲ್ಲಿರುವ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನಿಂದ ಜುಲೈ 18 ಸೋಮವಾರದಿಂದ ಪಡೆದುಕೊಳ್ಳಬಹುದು. ಪಾಸ್ ಪಡೆದವರಿಗೆ ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಇರುತ್ತದೆ ಎಂದು ಸಂಗೀತ ಭಾರತಿ ಪ್ರತಿಷ್ಠಾನದ ಉಪಾಧ್ಯಕ್ಷ ಪ್ರೊ.ನರೇಂದ್ರಎಲ್. ನಾಯಕ್ ತಿಳಿಸಿದ್ದಾರೆ.
ಮಂಗಳೂರಿನ ಇತಿಹಾಸದಲ್ಲೇ ಮೊದಲ ಬಾರಿಗೆ ಎಂಬಂತೆ 2018, 2019 ಮತ್ತು 2021ರ ಆವೃತ್ತಿಯಲ್ಲಿ ನಗರದ ಪುರಭವನದಲ್ಲಿ ಕಿಕ್ಕಿರಿದ ಪ್ರೇಕ್ಷಕರ ನಡುವೆ ಪ್ರದರ್ಶನ ನಡೆದಿತ್ತು. ಕೋವಿಡ್- 19ರಿಂದಾಗಿ ಮಂಕಾಗಿದ್ದ ಸಾಂಸ್ಕೃತಿಕ ರಂಗಕ್ಕೆ ಮತ್ತೆ ಚುರುಕು ಮುಟ್ಟಿಸುವ ದೃಷ್ಟಿಯಿಂದ ಮತ್ತು ಸಂಗೀತಾಸಕ್ತರಿಗೆ ಸಂಗೀತದ ರಸದೌತಣ ನೀಡುವ ಉದ್ದೇಶದಿಂದ ಈ ಬಾರಿ ಪಂಡಿತ್ ವೆಂಕಟೇಶ್‌ಕುಮಾರ್ ಮತ್ತು ದೇವಕಿ ಪಂಡಿತ್ ಇವರು ಏಕಕಾಲದಲ್ಲಿಅಭಂಗ ರೂಪದಲ್ಲಿ ಹಾಡುಗಾರಿಕೆ ನಡೆಸಲಿದ್ದಾರೆ. ಇವರಿಗೆತಬ್ಲದಲ್ಲಿ ಪ್ರಸಾದ್ ಪಾದೆ, ಪಕ್ಕ ವಾದ್ಯದಲ್ಲಿ ಪ್ರತಾಪ್ ಅವಾಡ್, ಹಾರ್ಮೋನಿಯಂನಲ್ಲಿಆದಿತ್ಯ ಒಕೆ, ರಿದಂನಲ್ಲಿ ಸೂರ್ಯಕಾಂತ್ ಸುರ್ವೆ, ಕೊಳಲಿನಲ್ಲಿ ಶದಾಜ್ ಗೋಡ್ಕಿಂಡಿ ಸಾಥ್ ನೀಡಲಿದ್ದಾರೆ.
ದೇಶದ ಹಲವು ಶ್ರೇಷ್ಠ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಿರುವ ಪಂಚಮ್ ನಿಶಾದ್‌ನ ಅಭೂತಪೂರ್ವ ಪರಿಕಲ್ಪನೆಯ ಕಾರ್ಯಕ್ರಮವಾಗಿರುವ `ಬೋಲಾವ ವಿಠಲ’ ಎಂಬ ವಿನೂತನ ಸಂತವಾಣಿ ಕಾರ್ಯಕ್ರಮ ಇದಾಗಿದೆ.
ಏನಿದು ಬೋಲಾವ ವಿಠಲ
ಪ್ರತಿ ವರ್ಷ ಆಷಾಢ ಮಾಸದಲ್ಲಿ ಪಂಚಮ್ ನಿಶಾದ್ ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತಿದ್ದು, ಕೋವಿಡ್‌ನ ಹಿನ್ನೆಲೆಯಲ್ಲಿ ಸ್ಥಗಿತವಾಗಿದ್ದು ಈಗ ಮತ್ತೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಪಂಚಮ್ ನಿಶಾದ್ ಸಂಸ್ಥೆಯು `ಬೋಲಾವ ವಿಠಲ’ ಶೀರ್ಷಿಕೆಯಡಿ ಹಿಂದೆ ಪುಣೆ, ಮುಂಬಯಿ, ಹೊಸದಿಲ್ಲಿ, ಗೋವಾ, ಕೊಲ್ಕೊತ್ತಾ, ಬೆಂಗಳೂರು ಹೀಗೆ ದೇಶದ ನಾನಾ ಪ್ರಮುಖ ನಗರಗಳಲ್ಲಿ ಕಳೆದ ಹಲವು ದಶಕದಿಂದ ಆಯೋಜಿಸಿಕೊಂಡು ಬರುತ್ತಿದೆ. ದೇಶದ ಪ್ರಮುಖ ನಗರಗಳ ನಿವಾಸಿಗಳಿಗೆ ಸಂಗೀತದ ಶ್ರೇಷ್ಠತೆಯನ್ನು ಪರಿಚಯಿಸಿದ ಬೋಲಾವ ವಿಠಲ್ ತಂಡವನ್ನು ಸಂಗೀತ ಭಾರತಿ ಪ್ರತಿಷ್ಠಾನ 2018ರಿಂದೀಚೆಗೆ ಮಂಗಳೂರಿಗೆ ಪರಿಚಯ ಮಾಡಿಸಿತು. ಇದೀಗ ಮುಂದುವರಿದ ಭಾಗವಾಗಿ ಈ ವರ್ಷವೂ ಕಾರ್ಯಕ್ರಮ ಆಯೋಜಿಸುತ್ತಿದೆ.
ಅಭಂಗ್ ಮೂಲಕ ಆರಾಧನೆ
ಪಾಂಡುರಂಗನಿಗೆ ಅಭಂಗ್ ರೂಪದಲ್ಲಿಆರಾಧನೆ ಶ್ರೇಷ್ಠ. ಪಂಡರಾಪುರದಲ್ಲಿ ಪ್ರತಿದಿನ ಇಂತಹ ಆರಾಧನೆಗಳು ನಡೆಯುತ್ತಿರುತ್ತವೆ. ಆದರೆ ಎಲ್ಲರಿಗೂ ಪಂಡರಾಪುರದಲ್ಲಿ ಹೋಗಿ ಆರಾಧನೆ ಮಾಡಲು ಆಗುವುದಿಲ್ಲ ಎಂಬ ಕಾರಣಕ್ಕೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇಲ್ಲಿ ಭಕ್ತಿ ಒಂದೆಡೆಯಾದರೆ ಇನ್ನೊಂದೆಡೆಯಿಂದ ಪ್ರತಿಭೆಯ ಅನಾವರಣ ಇರುತ್ತದೆ. ನಿಯಮಿತ ಕಾಲಮಿತಿಯಲ್ಲಿ ಮೂರು ಕಲಾವಿದರು ತಮ್ಮ ಶ್ರೇಷ್ಠತೆಯನ್ನು ಅನಾವರಣಗೊಳಿಸಲಿದ್ದಾರೆ. ಇದರಿಂದಾಗಿ ಈ ಕಾರ್ಯಕ್ರಮದ ಬಗ್ಗೆ ಸಾರ್ವಜನಿಕ ವಲಯದಲ್ಲಿಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಂಗೀತ ಪ್ರಿಯರಿಗೆ ವಿಭಿನ್ನ ಮಾದರಿಯ ಕಾರ್ಯಕ್ರಮ ಕೇಳಲು ಅವಕಾಶವಾಗಿದೆ ಎನ್ನುತ್ತಾರೆ ಸಂಗೀತ ಭಾರತಿ ಪ್ರತಿಷ್ಠಾನದ ಉಪಾಧ್ಯಕ್ಷ ಪ್ರೊ.ನರೇಂದ್ರ ಎಲ್. ನಾಯಕ್.