ಗಂಗೊಳ್ಳಿ:ಬೊಬ್ಬರ್ಯ ದೈವಸ್ಥಾನಕ್ಕೆ ನೂತನ ಬಾವಿ ಅರ್ಪಣೆ

ಗಂಗೊಳ್ಳಿ : ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರ ಸಂಘದ ವತಿಯಿಂದ ಗಂಗೊಳ್ಳಿ ಖಾರ್ವಿಕೇರಿಯ ಮಳಿಯಾಳಿ ಬೊಬ್ಬರ್ಯ ದೈವಸ್ಥಾನಕ್ಕೆ ನೂತನವಾಗಿ ನಿರ್ಮಿಸಿರುವ ತೀರ್ಥ ಬಾವಿಯನ್ನು ಮಂಗಳವಾರ ಸಮರ್ಪಿಸಲಾಯಿತು.
ಮಳಿಯಾಳಿ ಬೊಬ್ಬರ್ಯ ದೈವಸ್ಥಾನದ ವಠಾರದಲ್ಲಿ ಸುಮಾರು ೨.೭೦ ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ತೀರ್ಥ ಬಾವಿಯನ್ನು ಸಂಘದ ಪರವಾಗಿ ಸಂಘದ ಅಧ್ಯಕ್ಷ ಎಚ್.ಮಂಜು ಬಿಲ್ಲವ ಅವರು ದೈವಸ್ಥಾನಕ್ಕೆ ಸಮರ್ಪಿಸಿದರು. ಇದೇ ಸಂದರ್ಭ ಮಳೆಗಾಲದ ಮೀನುಗಾರಿಕಾ ಋತುವಿನಲ್ಲಿ ಮೀನುಗಾರಿಕೆಗೆ ತೆರಳಲು ಸ್ಥಳೀಯ ದೈವಕ್ಕೆ ಪೂಜೆ ಸಲ್ಲಿಸಿ, ಪ್ರಸಾದವನ್ನು ಸಮುದ್ರಕ್ಕೆ ಅರ್ಪಿಸಲಾಯಿತು. ಸಂಘದ ಉಪಾಧ್ಯಕ್ಷ ಗುರುನಾಥ ಪಟೇಲ್, ಖಜಾಂಚಿ ಸುರೇಶ ಖಾರ್ವಿ ಮದ್ದುಗುಡ್ಡೆ, ಚೌಕಿ ಮೋಹನ ಖಾರ್ವಿ, ಅತೀಫ್, ದೈವದ ಪಾತ್ರಿ ಮಂಜುನಾಥ, ರಾಘವೇಂದ್ರ ಪಟೇಲ್, ನಾಗಪ್ಪಯ್ಯ ಪಟೇಲ್, ಎಂ.ದೇವಿ ಸುರೇಶ ಖಾರ್ವಿ, ಮೇಸ್ತಿಗಳಾದ ಅಶೋಕ ಮತ್ತು ಮಹಾಲಿಂಗ, ಸಂಘದ ಸದಸ್ಯರು, ಭಕ್ತಾಭಿಮಾನಿಗಳು, ಮೀನುಗಾರ ಮುಖಂಡರು ಮತ್ತಿತರರು ಉಪಸ್ಥಿತರಿದ್ದರು.