ನಿಟ್ಟೆ: ಇಂದು ನಾವು ತಂತ್ರಜ್ಞಾನದ ವಿಚಾರವಾಗಿ ಎಷ್ಟೇ ಮುಂದುವರಿದಿದ್ದರೂ ಪ್ರತಿಯೋರ್ವ ಜೀವಿಗೆ ಅಗತ್ಯವಿರುವ ರಕ್ತದಂತಹ ವಸ್ತುವನ್ನು ಕೃತಕವಾಗಿ ಉತ್ಪಾದಿಸಲು ಆಗುವುದಿಲ್ಲ. ಇಂತಹ ಸಂದರ್ಭದಲ್ಲಿ ನಾವೆಲ್ಲರೂ ರಕ್ತದ ಮಹತ್ವ ಹಾಗೂ ಜೀವ ಉಳಿಸುವ ನಿಟ್ಟಿನಲ್ಲಿ ರಕ್ತದಾನದ ಅಗತ್ಯತೆಯನ್ನು ತಿಳಿದುಕೊಳ್ಳಬೇಕು ಎಂದು ಇಂಡಿಯನ್ ರೆಡ್ಕ್ರಾಸ್ ಸೊಸೈಟಿ ಕಾರ್ಕಳ ಘಟಕದ ಅಧ್ಯಕ್ಷ ಡಾ. ಕೆ.ಆರ್ ಜೋಷಿ ಹೇಳಿದರು.
ಅವರು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್), ರೆಡ್ಕ್ರಾಸ್ ಸೊಸೈಟಿ, 6 (ಕೆ.ಎ.ಆರ್) ನೇವಿ ಎನ್.ಸಿ.ಸಿ ಸಬ್ಯುನಿಟ್ ನಿಟ್ಟೆ, ಮೆಕ್ಯಾನಿಕಲ್ ವಿಭಾಗದ ಏಐಎಂಎಸ್ ಘಟಕ, ರೋಟರಿಕ್ಲಬ್ ನಿಟ್ಟೆ, ಲಯನ್ಸ್ ಕ್ಲಬ್ ಹಿರಿಯಡ್ಕ, ಕೆ.ಎಸ್ ಹೆಗ್ಡೆ ಮೆಡಿಕಲ್ ಕಾಲೇಜು, ನಿಟ್ಟೆ ಗಜ್ರಿಯಾ ಆಸ್ಪತ್ರೆ ಮತ್ತು ಉಡುಪಿ ಜಿಲ್ಲಾ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ಮೇ.26 ರಂದು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ನಿಟ್ಟೆ ಸಂಸ್ಥೆಯ ಈ ಯೋಜನೆಯಲ್ಲಿ ವಿವಿಧ ಸಂಘಸಂಸ್ಥೆಗಳು ಕೈಜೋಡಿಸಿರುವುದು ಶ್ಲಾಘನೀಯ. ಸುತ್ತಮುತ್ತಲ ಜಿಲ್ಲೆಗಳಲ್ಲಿ ವಿವಿಧ ಉತ್ತಮ ಬ್ಲಡ್ ಬ್ಯಾಂಕ್ ಸೇವೆ ಲಭ್ಯವಿದೆ. 18 ವರ್ಷದಿಂದ 60 ವರ್ಷದ ವರೆಗಿನ ಪುರುಷರು ವರ್ಷಕ್ಕೆ 4 ಬಾರಿ ಹಾಗೂ ಮಹಿಳೆಯರು 2 ಬಾರಿ ರಕ್ತದಾನ ಮಾಡುವುದರ ಮೂಲಕ ಜೀವ ಉಳಿಸುವ ಪುಣ್ಯಕಾರ್ಯ ಮಾಡಬಹುದಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ನಿರಂಜನ್ ಎನ್.ಚಿಪ್ಳೂಣ್ಕರ್ ಮಾತನಾಡಿ, ರಕ್ತದಾನ ಶಿಬಿರವು ಒಂದು ಉತ್ತಮ ಯೋಜನೆಯಾಗಿದ್ದು ಇದಕ್ಕೆ ವಿದ್ಯಾರ್ಥಿಗಳ ಬೆಂಬಲ ಅಗತ್ಯ. ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಈ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ನಿಟ್ಟೆ ರೋಟರಿ ಕ್ಲಬ್, ಹಿರಿಯಡ್ಕದ ಲಯನ್ಸ್ ಕ್ಲಬ್, ನಿಟ್ಟೆ ಸಂಸ್ಥೆಯ 2 ಆಸ್ಪತ್ರೆ ಹಾಗೂ ಉಡುಪಿ ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿಗಳ ಹಾಗೂ ಕಾಲೇಜಿನ ವಿದ್ಯಾರ್ಥಿಗಳ ಶ್ರಮ ಸ್ವಾಗತಾರ್ಹ ಎಂದರು.
ಉಪಪ್ರಾಂಶುಪಾಲ ಡಾ.ಶ್ರೀನಿವಾಸ ರಾವ್ ಬಿ ಆರ್, ನಿಟ್ಟೆ ರೋಟರಿ ಕ್ಲಬ್ನ ಅಧ್ಯಕ್ಷ ರೋ.ಗೋಪಾಲಕೃಷ್ಣ, ಹಿರಿಯಡ್ಕ ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಶೆಟ್ಟಿ, ನಿಟ್ಟೆ ರೆಡ್ಕ್ರಾಸ್ನ ಮುಖ್ಯಸ್ಥ ಡಾ.ಜನಾರ್ದನ್ ನಾಯಕ್, ಎನ್.ಸಿ.ಸಿ ಆಫೀಸರ್ ಡಾ.ಶಿವಪ್ರಸಾದ್ ಶೆಟ್ಟಿ, ಏಐಎಂಎಸ್ ಸಂಯೋಜಕ ಡಾ.ಎ.ಕೆ ಸೋಮಯಾಜಿ, ನಿಟ್ಟೆ ಗಜ್ರಿಯಾ ಆಸ್ಪತ್ರೆಯ ವೈದ್ಯ ಡಾ. ಅಶೋಕ್, ಕೆ.ಎಸ್ ಹೆಗ್ಡೆ ಆಸ್ಪತ್ರೆಯ ಡಾ.ಚಂದ್ರಿಕಾ ರಾವ್ ಹಾಗೂ ಉಡುಪಿ ಜಿಲ್ಲಾ ಆಸ್ಪತ್ರೆಯ ಡಾ.ವೀಣಾಕುಮಾರಿ ಉಪಸ್ಥಿತರಿದ್ದರು.
ಶಿಬಿರದ ಸಂಚಾಲಕ ಡಾ.ಜನಾರ್ದನ್ ನಾಯಕ್ ಅವರ ಮಾರ್ಗದರ್ಶನದಲ್ಲಿ ಈ ರಕ್ತದಾನ ಶಿಬಿರವನ್ನು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಯಶಸ್ವಿಯಾಗಿ ಸಂಪನ್ನಗೊಳಿಸಿದರು. ಈ ಒಂದು ದಿನದ ರಕ್ತದಾನ ಶಿಬಿರದಲ್ಲಿ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಹಾಗೂ ಭೋದಕೇತರ ವರ್ಗದವರ ರಕ್ತದಾನದೊಂದಿಗೆ 362 ಯುನಿಟ್ ರಕ್ತವನ್ನು ಸಂಗ್ರಹಿಸಲಾಗಿದೆ ಎಂದು ಪ್ರಾಶುಂಪಾಲರು ತಿಳಿಸಿದ್ದಾರೆ.