ಮಂಗಳೂರು: ಚಲಿಸುತ್ತಿದ್ದ ಆಟೋರಿಕ್ಷಾದಲ್ಲಿ ನಿಗೂಢ ಸ್ಫೋಟ; ಭಯೋತ್ಪಾದಕ ಕೃತ್ಯವೆಂದ ಪೊಲೀಸ್ ಮಹಾನಿರ್ದೇಶಕ

ಮಂಗಳೂರು: ಮಂಗಳೂರಿನಲ್ಲಿ ಚಲಿಸುತ್ತಿದ್ದ ಆಟೋರಿಕ್ಷಾ ಸ್ಫೋಟಗೊಂಡ ಒಂದು ದಿನದ ನಂತರ ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು ಭಾನುವಾರ ‘ನಿಗೂಢ ಸ್ಫೋಟ’ ಭಯೋತ್ಪಾದಕ ಕೃತ್ಯವಾಗಿದ್ದು, ಘಟನೆಯ ಕುರಿತು “ಆಳವಾದ ತನಿಖೆ” ನಡೆಯುತ್ತಿದೆ ಎಂದು ಹೇಳಿದ್ದಾರೆ.

ಅದು ಈಗ ದೃಢಪಟ್ಟಿದೆ. ಸ್ಫೋಟವು ಆಕಸ್ಮಿಕವಲ್ಲ ಆದರೆ ಗಂಭೀರ ಹಾನಿಯನ್ನುಂಟುಮಾಡುವ ಉದ್ದೇಶದಿಂದ ಮಾಡಿದ ಭಯೋತ್ಪಾದಕ ಕೃತ್ಯವಾಗಿದೆ. ಕರ್ನಾಟಕ ರಾಜ್ಯ ಪೊಲೀಸರು ಕೇಂದ್ರ ಏಜೆನ್ಸಿಗಳೊಂದಿಗೆ ಆಳವಾದ ತನಿಖೆ ನಡೆಸುತ್ತಿದ್ದಾರೆ ಎಂದು ಡಿಜಿಪಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಶನಿವಾರ ಚಲಿಸುತ್ತಿದ್ದ ಆಟೋರಿಕ್ಷಾ ಸ್ಫೋಟಗೊಂಡಿದ್ದು, ಬೆಂಕಿ ಮತ್ತು ದಟ್ಟವಾದ ಹೊಗೆ ಉಂಟಾಗಿದ್ದು, ಚಾಲಕ ಮತ್ತು ಪ್ರಯಾಣಿಕನಿಗೆ ಸುಟ್ಟ ಗಾಯಗಳಾಗಿವೆ. ಆಟೋ ಚಾಲಕನ ಪ್ರಕಾರ, ಪ್ರಯಾಣಿಕನ ಬ್ಯಾಗ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಅದು ವಾಹನಕ್ಕೆ ವ್ಯಾಪಿಸಿದೆ.

Image
Image: ANI

ಈ ಹಿಂದೆ, ಪೊಲೀಸರು ‘ಸ್ಫೋಟ’ ಎಂಬುವುದನ್ನು ತಳ್ಳಿಹಾಕಿದ್ದರು ಮತ್ತು ಆಟೋರಿಕ್ಷಾದಲ್ಲಿ ಬೆಂಕಿ ಅನಾಹುತ ಸಂಭವಿಸಿದೆ ಮತ್ತು ಭಯಪಡುವ ಅಗತ್ಯವಿಲ್ಲ ಎಂದು ಹೇಳಿದ್ದರು. ಘಟನೆಯ ಹಿಂದಿನ ಕಾರಣಗಳನ್ನು ಕಂಡುಹಿಡಿಯಲು ವಿಧಿ ವಿಜ್ಞಾನ ಪ್ರಯೋಗಾಲಯದ ತಂಡವು ಸ್ಥಳಕ್ಕೆ ಧಾವಿಸಿತ್ತು. ಇದೀಗ, ಸ್ಫೋಟವು ಆಕಸ್ಮಿಕವಲ್ಲ, ಆದರೆ ಗಂಭೀರ ಹಾನಿಯನ್ನುಂಟುಮಾಡುವ ಉದ್ದೇಶದಿಂದ ಮಾಡಲಾದ ಭಯೋತ್ಪಾದಕ ಕೃತ್ಯವಾಗಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.

ಸದ್ಯ ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳ ಸ್ಫೋಟ ಸ್ಥಳದಲ್ಲಿ ಬೀಡುಬಿಟ್ಟಿದೆ. ಮುಂದುವರಿದ ತನಿಖೆಯ ಭಾಗವಾಗಿ ಆಟೋರಿಕ್ಷಾವನ್ನು ಕೂಡ ಸ್ಥಳಕ್ಕೆ ತರಲಾಗಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳ ತಂಡವನ್ನು ಮಂಗಳೂರಿಗೆ ರವಾನಿಸಲಾಗಿದೆ.

Image
Image: Twitter

ಪ್ರಯಾಣಿಕರೊಬ್ಬರು ಸಾಗಿಸುತ್ತಿದ್ದ ಸ್ಫೋಟಗೊಂಡ ಕುಕ್ಕರ್‌ನಲ್ಲಿ ಶಂಕಾಸ್ಪದ ಸ್ಫೋಟಕ ವಸ್ತುವನ್ನು ರಾಜ್ಯ ಪೊಲೀಸರು ಪತ್ತೆ ಮಾಡಿದ್ದರಿಂದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಅವರು ಸ್ಫೋಟದ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ಕುಕ್ಕರ್‌ನ ಒಳಗಿನಿಂದ ನಾಲ್ಕು ಬ್ಯಾಟರಿಗಳು ಮತ್ತು ಸರ್ಕ್ಯೂಟ್ ವೈರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಏತನ್ಮಧ್ಯೆ, ಸ್ಫೋಟದಲ್ಲಿ ಶೇಕಡಾ 50 ರಷ್ಟು ಸುಟ್ಟ ಗಾಯಗಳಾಗಿರುವ ಪ್ರಯಾಣಿಕನನ್ನು ತನಿಖಾಧಿಕಾರಿಗಳು ಪ್ರೇಮ್ ರಾಜ್ ಕಾನೋಗಿ ಎಂದು ಅವರ ಗುರುತಿನ ಚೀಟಿಯ ಮೂಲಕ ಗುರುತಿಸಿದ್ದಾರೆ, ಆದರೆ ಐಡಿ ಕಾರ್ಡ್ ನಕಲಿ ಎಂದು ನಂಬಲಾಗಿದೆ. ಶನಿವಾರ ಮಂಗಳೂರು ರೈಲ್ವೆ ಜಂಕ್ಷನ್‌ನಿಂದ ಬರುತ್ತಿದ್ದ ಆಟೊರಿಕ್ಷಾವನ್ನು ನಾಗೂರಿನಲ್ಲಿ ಆತ ಹತ್ತಿದ್ದಾನೆ. ದುರ್ಗಾ ಪರಮೇಶ್ವರಿ ಎಂಬುವವರ ಹೆಸರಿನಲ್ಲಿ ಆಟೊ ನೋಂದಣಿಯಾಗಿರುವುದನ್ನು ಪೊಲೀಸರು ಪತ್ತೆ ಮಾಡಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.