ತೆಂಗು ಬೆಳೆಗಾರರಿಗೆ ಕಾಡುತ್ತಿರುವ ಕಪ್ಪು ತಲೆ ಹುಳುವಿನ ಬಾಧೆ; ರೈತರಿಗೆ ತೀವ್ರ ಸಂಕಷ್ಟ- ಕ್ರಮಕ್ಕೆ ಸಿಎಂ ಸೂಚನೆ

ಬೆಂಗಳೂರು: ‘ತೆಂಗು ಬೆಳೆಗಾರರಿಗೆ ಕಾಡುತ್ತಿರುವ ಕಪ್ಪು ತಲೆ ಹುಳುವಿನ ಬಾಧೆ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ತಜ್ಞರಿಂದ ತಕ್ಷಣ ವರದಿ ಪಡೆದು ಪ್ರಸ್ತಾವ ಮಂಡಿಸಬೇಕು’ ಎಂದು ತೋಟಗಾರಿಕಾ ಇಲಾಖೆಯ ನಿರ್ದೇಶಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

‘ತೆಂಗು ಬೆಳೆಗೆ ಕಪ್ಪು ತಲೆ ಹುಳುವಿನ ಬಾಧೆ ವ್ಯಾಪಕವಾಗಿದ್ದು, ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಕೂಡಲೇ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು’ ಎಂದು ವಿಧಾನ ಪರಿಷತ್‌ ಕಾಂಗ್ರೆಸ್ ಸದಸ್ಯ ದಿನೇಶ್‌ ಗೂಳಿಗೌಡ ಅವರು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದರು.

ತುರ್ತು ಕ್ರಮಕ್ಕೆ ಮನವಿ:

‘ಮಂಡ್ಯ, ತುಮಕೂರು, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಮೈಸೂರು, ಚಾಮರಾಜನಗರ, ಹಾಸನ ಜಿಲ್ಲೆಗಳಲ್ಲಿ ತೆಂಗು ಬೆಳೆಯನ್ನು ಪ್ರಮುಖ ವಾಣಿಜ್ಯ ಬೆಳೆಯಾಗಿ ಬೆಳೆಯಲಾಗುತ್ತಿದೆ. ಇತ್ತಿಚಿನ ವರ್ಷಗಳಲ್ಲಿ ತೆಂಗು ಬೆಳೆಗೆ ಕಪ್ಪು ತಲೆ ಕಂಬಳಿ ಹುಳು ಬಾಧೆ ಹೆಚ್ಚಾಗಿದೆ. ಹುಳದ ಹತೋಟಿ ಕೈಗೊಳ್ಳದಿದ್ದರೆ ಶೇ 80ರವರೆಗೆ ಉತ್ಪಾದನೆ ಕುಂಠಿತವಾಗಲಿದೆ. ಸಮರೋಪಾದಿಯಲ್ಲಿ ಕ್ರಮ ಕೈಗೊಂಡರಷ್ಟೇ ನಿರ್ವಹಣೆ ಜೊತೆಗೆ ಹರಡುವುದನ್ನು ನಿಯಂತ್ರಿಸಲು ಸಾಧ್ಯ. ಹೀಗಾಗಿ, ಇದರ ನಿಯಂತ್ರಣಕ್ಕೆ ತುರ್ತು ಕ್ರಮ ತೆಗೆದುಕೊಳ್ಳಬೇಕು’ ಎಂದು ಕೋರಿದ್ದರು.

‘ವ್ಯಾಪಕ ಸಮೀಕ್ಷೆ ಕೈಗೊಳ್ಳಬೇಕು. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಕಾರ್ಯಪಡೆ ರಚಿಸಬೇಕು.  ಅಗತ್ಯ ಅನುದಾನ ಮತ್ತು ತಾಂತ್ರಿಕ ಬೆಂಬಲ ನೀಡಿ ಸ್ಥಳೀಯ ಜೈವಿಕ ನಿಯಂತ್ರಣ ಪ್ರಯೋಗಾಲಯಗಳನ್ನು ಬಲಪಡಿಸಬೇಕು, ಕೀಟ ನಿಯಂತ್ರಣದ ಬಗ್ಗೆ ರೈತರಿಗೆ ನಿರಂತರವಾಗಿ ತಾಂತ್ರಿಕ ಮಾರ್ಗದರ್ಶನ, ಅರಿವು ಮತ್ತು ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸಬೇಕು. ಸಬ್ಸಿಡಿ ದರದಲ್ಲಿ ನಿಯಂತ್ರಣ ವಸ್ತುಗಳನ್ನು ಪೂರೈಸಬೇಕು. ರೈತರ ತೋಟಗಳಲ್ಲಿ ಯಶಸ್ವಿಯಾಗಿ ಪ್ರಾತ್ಯಕ್ಷಿಕೆ ಮಾಡಲು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳಿಗೆ ವಿಶೇಷ ಅನುದಾನ ನೀಡಬೇಕು’ ಎಂದೂ ಅವರು ಮನವಿ ಮಾಡಿದ್ದರು.