ಹಾವೇರಿಯ ಕರ್ಜಿಗಿಯಲ್ಲಿ ಕಾರಹುಣ್ಣಿಮೆ ಸಂಭ್ರಮ

ಹಾವೇರಿ : ಹಾವೇರಿ ಜಿಲ್ಲೆಯ ಕರ್ಜಗಿ ಗ್ರಾಮದಲ್ಲಿ ಕಾರಹುಣ್ಣಿಮೆ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಬ್ರಹ್ಮಲಿಂಗೇಶ್ವರ ದೇವಸ್ಥಾನಕ್ಕೆ ವಿಶೇಷ ಅಲಂಕಾಲ ಮಾಡುವ ಮೂಲಕ ಪೂಜಾ ಕೈಂಕರ್ಯಗಳು ನೆರವೇರಿದವು.

ಕಾರಹುಣ್ಣಿಮೆ ರೈತರ ಪಾಲಿನ ಸಂಭ್ರಮದ ಹಬ್ಬಗಳಲ್ಲೊಂದು.

ಪ್ರತಿ ವರ್ಷ ಉತ್ತರ ಕನಾ೯ಟಕ ಭಾಗದ ರೈತರು ಕಾರಹುಣ್ಣಿಮೆ ಹಬ್ಬವನ್ನು ಅತ್ಯಂತ ಸಡಗರದಿಂದ ಆಚರಿಸುತ್ತಾರೆ. ಹಾವೇರಿಯ ಕರ್ಜಗಿ ಗ್ರಾಮದಲ್ಲೂ ಸಹ ಈ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಯಿತು.

ಹಬ್ಬದ ಆಚರಣೆ ಹೇಗಿರುತ್ತದೆ? : ಮೂರು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸಕ್ಕೆ ಬ್ರಹ್ಮಲಿಂಗೇಶ್ವರ ಜಾತ್ರೆ ಎಂದೇ ಕರೆಯಲಾಗುತ್ತದೆ. ಮೊದಲ ದಿನ ಹೂನ್ನುಗ್ಗಿ ಆಚರಿಸಿದರೆ, ಕೊನೆಯ ಎರಡು ದಿನ ದೊಡ್ಡಕ್ಕಿ ಮತ್ತು ಸಣ್ಣಕ್ಕಿ ಬಂಡಿ ಓಡಿಸಲಾಗುತ್ತದೆ. ಈ ಬಂಡಿ ಓಡಿಸುವಾಗ ಯಾವುದೇ ಅವಘಡ ನಡೆಯುವುದಿಲ್ಲ. ಆಕಸ್ಮಿಕ ಅವಘಡ ಸಂಭವಿಸಿದರೂ ಆದು ಬ್ರಹ್ಮಲಿಂಗೇಶ್ವರ ದೇವರ ಆಶೀರ್ವಾದ ಎಂದು ನಂಬಲಾಗುತ್ತದೆ.
ಇನ್ನು ಕಾರಹುಣ್ಣಿಮೆ ದಿನದಂದು ಪ್ರಮುಖವಾಗಿ ಎತ್ತು ಮತ್ತು ಹೋರಿಗಳೇ ಹೆಚ್ಚು ಆಕರ್ಷಣೆ ಆಗಿರುತ್ತವೆ. ಹಬ್ಬದ ಹಿನ್ನೆಲೆ ಎತ್ತು, ಹೋರಿಗಳ ಮೈ ತೊಳೆದು ವಿವಿಧ ಬಗೆಯ ವಸ್ತುಗಳಿಂದ ಸಿಂಗರಿಸಲಾಗುತ್ತದೆ. ಕೊಂಬುಗಳಿಗೆ ಬಣ್ಣ ಬಳೆಯಲಾಗುತ್ತದೆ‌. ಜೊತೆಗೆ, ಮೈಮೇಲೆ ವಿಶೇಷವಾದ ಚಿತ್ತಾರ ಬಿಡಿಸಿ ಮೆರವಣಿಗೆ ಮಾಡಲಾಗುತ್ತದೆ. ಸಿಂಗರಿಸಲಾದ ಎತ್ತುಗಳಿಗೆ ಹೋಳಿಗೆ, ಕಡುಬು ಖಾದ್ಯಗಳನ್ನು ನೀಡುವ ಮೂಲಕ ಅನ್ನದಾತರು ತಮ್ಮ ಪ್ರಾಣಿ ಪ್ರೀತಿಯ ಅಭಿಮಾನ ಮೆರೆಯುತ್ತಾರೆ. ಹಾಗೆಯೇ, ಕರ್ಜಗಿ ಗ್ರಾಮದಲ್ಲಿ ಹೆಣ್ಣುಮಕ್ಕಳನ್ನು ಹೊರ ಗ್ರಾಮಕ್ಕೆ ನೀಡುವುದಾಗಲಿ ಅಥವಾ ಬೇರೆ ಗ್ರಾಮದಿಂದ ತರುವ ಮಾತುಕತೆಗಳು ಇಂದೇ ನಿರ್ಧಾರವಾಗುತ್ತವೆ. ಈ ದಿನದಂದು ಬ್ರಹ್ಮಲಿಂಗೇಶ್ವರ ದೇವಸ್ಥಾನಕ್ಕೆ ವಿಶೇಷ ಅಲಂಕಾರ ಮಾಡಲಾಗಿರುತ್ತದೆ. ಅಲ್ಲದೇ, ವಿಶೇಷವಾದ ಪೂಜಾ ಕೈಂಕರ್ಯಗಳು ನಡೆಯುತ್ತವೆ.

ಕರ್ಜಗಿ ಗ್ರಾಮದಲ್ಲಿ ನಡೆದ ಕಾರಹುಣ್ಣಿಮೆ ಹಬ್ಬ ಹೇಗಿತ್ತು? : ಕಾರಹುಣ್ಣಿಮೆ ಹಿನ್ನೆಲೆ ಕರ್ಜಗಿ ಗ್ರಾಮವನ್ನು ನವವಧುವಿನಂತೆ ಸಿಂಗಾರಗೊಳಿಸಲಾಗಿತ್ತು. ಮೊದಲ ದಿನ ರಾಸುಗಳಿಗೆ ಸಿಹಿ ಉಣಿಸುವ ಹೂನ್ನುಗ್ಗಿ ಕಾರ್ಯಕ್ರಮ ಆಚರಿಸಲಾಯಿತು. ಹೂನ್ನುಗ್ಗಿ ಮಾರನೇಯ ದಿನ ದೊಡ್ಡಕ್ಕಿ ಬಂಡಿ ಓಡಿಸಲಾಯಿತು. ಕೊನೆಯ ದಿನ ಸಣ್ಣಕ್ಕಿ ಬಂಡಿ ಓಡಿಸಲಾಯಿತು. ಈ ಬಂಡಿಯ ವಿಶೇಷತೆ ಎಂದರೆ ಬಂಡಿ ಓಡಿಸುವಾಗ ಯಾವುದೇ ಸಮಸ್ಯೆಗಳು ಕಂಡು ಬರುವುದಿಲ್ಲ. ಒಂದು ವೇಳೆ ಏನಾದರೂ ದುರಂತ ಸಂಭವಿಸಿದರೆ ಅದು ದೇವರ ವರಪ್ರಸಾದ ಎಂದು ತಿಳಿಯಲಾಗುತ್ತದೆ. ಪ್ರತಿ ಬಂಡಿಯಲ್ಲಿ ಏಳು ಜನ ವೀರಗಾರರಿರುತ್ತಾರೆ. ಇವರನ್ನು ಆರಿಸುವ ಪ್ರಕ್ರಿಯೆ ಸಹ ವಿಭಿನ್ನವಾಗಿದ್ದು, ಇವರು 9 ದಿನಗಳ ಕಾಲ ಉಪವಾಸ ನಡೆಸುತ್ತಾರೆ. ಕಾರ ಹುಣ್ಣಿಮೆಯ ಆಚರಣೆ ನಂತರ ಉಪವಾಸ ಕೈ ಬಿಡುತ್ತಾರೆ.