ಬಿಜೆಪಿಗೆ ಮತ ನೀಡಿದ್ದೇ sslcಯಲ್ಲಿ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ ಸ್ಥಾನ ಕುಸಿಯಲು ಕಾರಣ: ಸಚಿವ ರೇವಣ್ಣ

ಹಾಸನ: ಉಡುಪಿ- ದಕ್ಷಿಣ ಕನ್ನಡದವರು ಬಿಜೆಪಿಯವರಿಗೆ ಮತಹಾಕಿದ್ದಾರೆ. ಇದಕ್ಕಾಗಿ ಅವರ ಸ್ಥಾನ ಕುಸಿದಿದೆ. ಜಾತ್ಯತೀತರಿಗೆ ಅವರು ವೋಟ್ ಹಾಕಿದ್ದರೆ ಮೊದಲನೆಯ ಸ್ಥಾನ ಬರುತ್ತಿತ್ತು. ಅವರು ಶಿಕ್ಷಣಕ್ಕೆ ಒತ್ತು ನೀಡುತ್ತಿಲ್ಲ ಎನ್ನುವುದಕ್ಕೆ ಇದೇ ಉದಾಹರಣೆ ಎಂದು ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ವಿವಾದದ ಕಿಡಿ ಹೊತ್ತಿಸಿದ್ದಾರೆ.
ಪ್ರತಿ ಬಾರಿ ಎಸ್  ಎಸ್  ಎಲ್  ಸಿ ಫಲಿತಾಂಶದಲ್ಲಿ ಮೊದಲ ಅಥವಾ ಎರಡನೆಯ ಸ್ಥಾನ ಪಡೆದುಕೊಳ್ಳುತ್ತಿದ್ದ ಉಡುಪಿ ಜಿಲ್ಲೆಯು ಈ ಬಾರಿ ಐದನೇ ಸ್ಥಾನಕ್ಕೆ ಕುಸಿದಿರುವುದಕ್ಕೆ ವ್ಯಂಗ್ಯವಾಡಿದ್ದಾರೆ.
ಹಾಸನ ಜಿಲ್ಲೆಯು ಎಸ್  ಎಸ್  ಎಲ್  ಸಿಯಲ್ಲಿ ಮೊದಲ ಸ್ಥಾನ ಪಡೆಯಲು ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಶ್ರಮವೇನೂ ಇಲ್ಲ. ಪತ್ನಿ ಭವಾನಿ ರೇವಣ್ಣ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಮಾಡಿದ ಕೆಲಸಗಳೇ ಇದಕ್ಕೆ ಕಾರಣ ಎಂದು ಹೇಳಿದ್ದಾರೆ.
ಹಾಸನ ಪ್ರಥಮ ಸ್ಥಾನದ ಬರಲು ದೇವರ ಅನುಗ್ರಹ ಕಾರಣ. ಜತೆಗೆ ನನ್ನ ಪತ್ನಿ ಭವಾನಿ ಕೂಡ ಕಾರಣ. ಶಿಕ್ಷಣದ ಪ್ರಗತಿಗೆ ಸಂಬಂಧಿಸಿದಂತೆ 3-4 ಬಾರಿ ನಾನು ಸಭೆಯಲ್ಲಿ ಭಾಗವಹಿಸಿದ್ದೇನೆ. ಪತ್ನಿ ಭವಾನಿ ಜಿಲ್ಲಾ ಪಂಚಾಯಿತಿ ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷೆಯಾಗಿ ಸಭೆಗಳನ್ನು ನಡೆಸಿದ್ದರು. ವಿಶೇಷ ತರಗತಿಗಳನ್ನು ನಡೆಸಲು ಸೂಚಿಸಿದ್ದರು ಎಂದು ರೇವಣ್ಣ ಅಭಿಪ್ರಾಯಪಟ್ಟಿದ್ದಾರೆ.