ಉಡುಪಿ: ನೇಪಾಳ ಮಾದರಿಯಲ್ಲಿ ಭಾರತ ದೇಶದಲ್ಲಿಯೂ ಜನರು ದಂಗೆ ಹೇಳಬಹುದೆಂಬ ರೀತಿಯ ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಉಡುಪಿ ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಘಟಕದ ಮುಖ್ಯಸ್ಥ ರೋಶನ್ ಶೆಟ್ಟಿಯನ್ನು ಕೂಡಲೇ ಬಂಧಿಸಿ, ಆತನ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾ ಯುವ ಮೋರ್ಚಾ ಆಗ್ರಹಪಡಿಸಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಅವರು, ರೋಶನ್ ಶೆಟ್ಟಿ ಭಾರತದ ಸಾರ್ವಭೌಮತೆ, ಏಕತೆ ಹಾಗೂ ಸಮಾಜದ ಶಾಂತಿಗೆ ಧಕ್ಕೆ ತರುವಂತ ಪೋಸ್ಟ್ ಹಾಕಿದ್ದಾರೆ.
ಅಲ್ಲದೆ, ನೇಪಾಳ ಮಾದರಿಯಲ್ಲಿ ಭಾರತ ದೇಶದಲ್ಲಿಯೂ ಜನರು ದಂಗೆ ಹೇಳಬಹುದೆಂಬ ರೀತಿಯ ಪೋಸ್ಟರ್ ಅನ್ನು ಹಂಚಿಕೆ ಮಾಡಿದ್ದು, ಈ ಪೋಸ್ಟ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅವಹೇಳನ ಮಾಡಿದ್ದಾರೆ. ಪ್ರಧಾನಿಯ ಅಣಕುಚಿತ್ರ ಹಾಗೂ ಬಿಜೆಪಿ ಧ್ವಜವನ್ನು ಬಳಸಿ ದೇಶದ್ರೋಹಿ ಸಂದೇಶ ಹರಡುವ ಯತ್ನ ನಡೆದಿದೆ ಎಂದು ಆರೋಪಿಸಿದ್ದಾರೆ
ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಯುವಮೋರ್ಚಾ ನೇತೃತ್ವದಲ್ಲಿ ಕೋಟ ಪೊಲೀಸ್ ಠಾಣೆಯಲ್ಲಿ ರೋಶನ್ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಯುವ ಮೋರ್ಚಾದ ರಾಜ್ಯ ಕಾರ್ಯದರ್ಶಿ ವಿಖ್ಯಾತ್ ಶೆಟ್ಟಿ, ಬಿಜೆಪಿ ಜಿಲ್ಲಾ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಅಭಿರಾಜ್ ಸುವರ್ಣ, ನಗರ ಯುವ ಮೋರ್ಚಾದ ಅಧ್ಯಕ್ಷ ಶ್ರೀವತ್ಸ, ಪ್ರಧಾನ ಕಾರ್ಯದರ್ಶಿ ನಿತಿನ್ ಪೈ ಉಪಸ್ಥಿತರಿದ್ದರು.












