ಗೋಹತ್ಯೆ ತಡೆ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ ತಿರುಚಿದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ: ಬಿಜೆಪಿ

ಬೆಂಗಳೂರು: ಕರ್ನಾಟಕ ಗೋಹತ್ಯೆ ತಡೆ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆಯ (ಕೆಪಿಎಸ್‌ಪಿಸಿಎ) ಅಸ್ತಿತ್ವದಲ್ಲಿರುವ ನಿಬಂಧನೆಗಳನ್ನು ತಿರುಚಲು ಆಡಳಿತಾರೂಢ ಕಾಂಗ್ರೆಸ್ ಪ್ರಯತ್ನಿಸಿದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ಬಿಜೆಪಿ ಭಾನುವಾರ ಎಚ್ಚರಿಕೆ ನೀಡಿದೆ.

ಗೋಹತ್ಯೆ ನಿಷೇಧವನ್ನು ಎಮ್ಮೆಗಳಿಗೂ ವಿಸ್ತರಿಸದಿರುವುದನ್ನು ಪ್ರಶ್ನಿಸಿ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಗದ್ದಲ ಎಬ್ಬಿಸಿದ ಒಂದು ದಿನದ ಬಳಿಕ ಈ ಎಚ್ಚರಿಕೆ ಬಂದಿದೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್, 2021 ರಲ್ಲಿ ಕೆಪಿಎಸ್‌ಪಿಸಿಎ ಜಾರಿಗೆ ಬಂದಿತು ಮತ್ತು ಅದರ ನಿಬಂಧನೆಗಳನ್ನು ಚೆನ್ನಾಗಿ ಯೋಚಿಸಿ ರೂಪಿಸಲಾಗಿದೆ ಎಂದು ಹೇಳಿದರು.

ಈ ಕಾಯ್ದೆಯು ‘ದೇಶದಲ್ಲಿ ಗೋಹತ್ಯೆ ನಿಷೇಧ’ ಎನ್ನುವ ಮಹಾತ್ಮ ಗಾಂಧಿಯವರ ದೂರದೃಷ್ಟಿಯನ್ನು ಜಾರಿಗೆ ತರುವ ಗುರಿಯನ್ನು ಹೊಂದಿದೆ ಎಂದರು.

ಕಾಂಗ್ರೆಸ್ ಕೂಡ 1948 ಮತ್ತು 1964ರಲ್ಲಿ ಇದೇ ರೀತಿಯ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿತ್ತು’ ಎಂದು ವಾಗ್ದಾಳಿ ನಡೆಸಿದ ಅವರು, ಈಗ ನವ ಕಾಂಗ್ರೆಸ್ ಅದನ್ನು ಮರೆತಿದೆ. ಹಿಂದೂಗಳಿಗೆ ಗೋವು ಕೇವಲ ಯಾವುದೇ ಪ್ರಾಣಿಯಲ್ಲ; ಇದು ತಾಯಿ ದೇವತೆಗಿಂತ ಕಡಿಮೆಯಿಲ್ಲ. ಆದ್ದರಿಂದ, ಅಸ್ತಿತ್ವದಲ್ಲಿರುವ ಕಾಯಿದೆಯನ್ನು ಬದಲಿಸುವ ಅಥವಾ ಯಾವುದೇ ನಿಬಂಧನೆಗಳನ್ನು ತೆಗೆದುಹಾಕುವ ಯಾವುದೇ ಕ್ರಮವನ್ನು ಬಿಜೆಪಿ ವಿರೋಧಿಸುವುದನ್ನು ಮುಂದುವರಿಸುತ್ತದೆ ಎಂದರು.

ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ಮಾಜಿ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಕೂಡಾ ಆಡಳಿತ ಪಕ್ಷದ ವಿರುದ್ದ ಕಿಡಿಕಾರಿದ್ದಾರೆ.