ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಹಂತಕರನ್ನು ಎನ್ಕೌಂಟರ್ ಮಾಡಲು ಆಗ್ರಹಿಸಿದ ಕುಯಿಲಾಡಿ; ಜಿಹಾದಿಗಳಿಗೆ ಅವರದ್ದೇ ಭಾಷೆಯಲ್ಲಿ ಉತ್ತರಿಸಿ ಎಂದ ಯಶಪಾಲ್ ಸುವರ್ಣ

ಉಡುಪಿ: ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯನ್ನು ಉಡುಪಿ ಜಿಲ್ಲಾ ಬಿಜೆಪಿ ತೀವ್ರವಾಗಿ ಖಂಡಿಸಿದೆ. ಹಂತಕರನ್ನು ಶೀಘ್ರ ಪತ್ತೆ ಹಚ್ಚಿ ಕಾನೂನಾತ್ಮಕ ಉಗ್ರ ಶಿಕ್ಷೆಗೆ ಒಳಪಡಿಸುವ ಜೊತೆಗೆ ಹಂತಕರ ಹಿಂದಿರುವ ಸಂಘಟನೆಯನ್ನು ಪತ್ತೆ ಹಚ್ಚಿ ರೂವಾರಿ ಜಿಹಾದಿಗಳನ್ನು ಹೈದರಾಬಾದ್ ಮಾದರಿಯಲ್ಲಿ ಎನ್ಕೌಂಟರ್ ಮಾಡಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಆಗ್ರಹಿಸಿದ್ದಾರೆ.

ಶಿವಮೊಗ್ಗದ ಹರ್ಷ ಹತ್ಯೆಯ ಬಳಿಕ ಇದೀಗ ನಡೆದಿರುವ‌ ಪ್ರವೀಣ್ ನೆಟ್ಟಾರು ಕಗ್ಗೊಲೆ ರಾಜ್ಯ ಗೃಹ ಖಾತೆಗೆ ಸವಾಲಾಗಿ ಪರಿಣಮಿಸಿದ್ದು, ಬಿಜೆಪಿ ಮತ್ತು ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಗುರಿಯಾಗಿಸಿ ನಡೆಯುತ್ತಿರುವ ಇಂತಹ ನರಮೇಧಕ್ಕೆ ತಕ್ಷಣ ತಡೆಯೊಡ್ಡಿ ಉತ್ತರ ಪ್ರದೇಶದ ಕ್ಷಿಪ್ರ ಕಾರ್ಯಾಚರಣೆ ಮಾದರಿಯಲ್ಲಿ ಕಾರ್ಯಪ್ರವೃತ್ತರಾಗುವ ಅನಿವಾರ್ಯತೆ ಇದೆ ಎಂದಿದ್ದಾರೆ .

ಬಿಜೆಪಿ ಮುಖಂಡ ಯಶ್ ಪಾಲ್ ಸುವರ್ಣ ಆಕ್ರೋಶ

ನಿರಂತರವಾಗಿ ಹಿಂದೂ ಕಾರ್ಯಕರ್ತರ ಸರಣಿ ಹತ್ಯೆಯಲ್ಲಿ ತೊಡಗಿರುವ ಮತಾಂಧ ಜಿಹಾದಿಗಳಿಗೆ ಅವರದೇ ಭಾಷೆಯಲ್ಲಿ ಉತ್ತರ ನೀಡುವ ಅನಿವಾರ್ಯ ಸನ್ನಿವೇಶ ನಿರ್ಮಾಣವಾಗಿದೆ ಎಂದು ಬಿಜೆಪಿ ಮುಖಂಡ ಯಶ್ ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಸಿದ್ದರಾಮಯ್ಯ ಆಡಳಿತದಲ್ಲಿ ರಾಜಾರೋಷವಾಗಿ ನಡೆಯುತ್ತಿದ್ದ ಹಿಂದೂ ಕಾರ್ಯಕರ್ತರ ಕಗ್ಗೊಲೆಗೆ ಪ್ರತಿಭಟಿಸಿದ ಹಿಂದೂ ಕಾರ್ಯಕರ್ತರು ನಮ್ಮದೇ ಪಕ್ಷದ ಸರಕಾರದಲ್ಲೂ ಮತಾಂಧ ಶಕ್ತಿಗಳ ಅಟ್ಟಹಾಸಕ್ಕೆ ಬಲಿಯಾಗುತ್ತಿರುವುದು ದುರದೃಷ್ಟಕರ.

ಈ ಬರ್ಬರ ಹತ್ಯೆಯಿಂದ ಮಾನಸಿಕವಾಗಿ ಹಿಂದೂ ಕಾರ್ಯಕರ್ತರ ಸ್ಥೈರ್ಯವನ್ನು ಕುಗ್ಗಿಸುವ ಹುನ್ನಾರದ ಭಾಗವಾಗಿ ಹತ್ಯೆಗಳು ನಡೆಯುತ್ತಿದ್ದು, ಪ್ರತಿಬಾರಿ ಈ ರೀತಿಯ ಹತ್ಯೆ ನಡೆದಾಗ ಕೇವಲ ಸಾಮಾಜಿಕ ಜಾಲತಾಣದಲ್ಲಿ ಸಾಂತ್ವನ, ಸಂತಾಪ ಸೂಚಿಸಿ, ಮೃತರ ಕುಟುಂಬಕ್ಕೆ ಪರಿಹಾರ ಘೋಷಣೆಗೆ ಸೀಮಿತವಾಗದೇ ಹಂತಕರಿಗೆ ಇನ್ನೆಂದೂ ಈ ರೀತಿಯ ಕೃತ್ಯ ನಡೆಸದಂತೆ ಅವರದೇ ಭಾಷೆಯಲ್ಲಿ ತಕ್ಕ ಉತ್ತರ ನೀಡಬೇಕಾಗಿದೆ.

ಕರಾವಳಿ ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಿಂದ ಹಿಜಾಬ್ ವಿವಾದದಿಂದ ಆರಂಭಗೊಂಡು ನಡೆದ ಹಲವು ಘಟನೆಯಲ್ಲಿ ಸಮಾಜಘಾತಕ ಶಕ್ತಿಗಳನ್ನು ಗಟ್ಟಿಯಾಗಿ ಖಂಡಿಸಿದ ಶಿವಮೊಗ್ಗದ ಹರ್ಷ, ಬೆಳ್ಳಾರೆ ಪ್ರವೀಣ್ ನೆಟ್ಟಾರ್ ಹತ್ಯೆ ಹಾಗೂ ಹಿಂದೂ ಕಾರ್ಯಕರ್ತರಿಗೆ ನಿರಂತರ ಬೆದರಿಕೆ ಪ್ರಕರಣಗಳನ್ನು ಪೊಲೀಸ್ ಇಲಾಖೆ ಹಾಗೂ ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸಿ ಈ ದೇಶದ್ರೋಹಿ ಚಟುವಟಿಕೆಗಳಲ್ಲಿ ತೊಡಗಿರುವ ಎಸ್ ಡಿ ಪಿ ಐ, ಪಿ ಎಫ್ ಐ ಸಂಘಟನೆಯನ್ನು ನಿಷೇಧಿಸುವಂತೆ ಹಿಂದೂ ಕಾರ್ಯಕರ್ತರು ಆಗ್ರಹಿಸುತ್ತಿದ್ದು ಸರಕಾರ ಈ ನಿಟ್ಟಿನಲ್ಲಿ ತುರ್ತು ಕ್ರಮ ಕೈಗೊಂಡು ಹಿಂದೂ ಕಾರ್ಯಕರ್ತರಲ್ಲಿ ಭರವಸೆ ಮೂಡಿಸಲು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ