ಗುಜರಾತಿನಲ್ಲಿ ಸತತ ಏಳನೇ ಬಾರಿ ಅರಳಿದ ಕಮಲ; ಹಿಮಾಚಲ ಕೈ ಪಾಲು: ಎಮ್.ಸಿ.ಡಿ ಗೆ ತೃಪ್ತಿ ಪಟ್ಟುಕೊಂಡ ಆಪ್

ನವದೆಹಲಿ: ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಹೊರಬಿದ್ದಿದ್ದು, ಗುಜರಾತಿನಲ್ಲಿ ಸತತ ಏಳನೇ ಬಾರಿಗೆ ಕಮಲ ಅರಳಿಸುವಲ್ಲಿ ಭಾರತೀಯ ಜನತಾ ಪಕ್ಷ ಯಶಸ್ವಿಯಾಗಿದೆ.

ಗುಜರಾತ್ ನಲ್ಲಿ ಸತತ ಏಳನೇ ಬಾರಿಗೆ ಅರಳಿದ ಕಮಲ

ಬಿಜೆಪಿ 71 ಸೀಟು ಗೆದ್ದಿದ್ದು 87 ರಲ್ಲಿ ಮುನ್ನಡೆ ಸಾಧಿಸಿ 158 ಸೀಟು ಸಿಗುವ ಸಾಧ್ಯತೆಗಳಿದ್ದು ಪೂರ್ಣ ಬಹುಮತದ ಸರಕಾರ ರಚಿಸುವುದು ಬಹುತೇಕ ಖಚಿತವಾಗಿದೆ , ಐ.ಎನ್.ಸಿ(ಕಾಂಗ್ರೆಸ್) 6 ಸೀಟು ಗೆದ್ದಿದ್ದು10 ರಲ್ಲಿ ಮುನ್ನಡೆ ಸಾಧಿಸಿ 16 ಸೀಟು ಗಳಿಸುವ ಸಾಧ್ಯತೆ ಇದೆ. ಅರವಿಂದ್ ಕೇಜ್ರಿವಾಲರ ಆಪ್ ಪಕ್ಷಕ್ಕೆ ಕೇವಲ 4 ಸೀಟುಗಳು ದೊರಕಿವೆ. ಸ್ವತಂತ್ರ ಅಭ್ಯರ್ಥಿಗಳು 3 ಸೀಟುಗಳಲ್ಲಿ ಗೆದ್ದಿದ್ದಾರೆ.

ಗುಜರಾತಿನಲ್ಲಿ ಭೂಪೇಂದ್ರ ಪಟೇಲ್ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಗುಜರಾತ್ ಬಿಜೆಪಿ ಮುಖ್ಯಸ್ಥ ಸಿಆರ್ ಪಾಟೀಲ್ ಹೇಳಿರುವುದಾಗಿ ಸುದ್ದಿ ಸಂಸ್ಥೆ ಎ.ಎನ್.ಐ ವರದಿ ಮಾಡಿದೆ.

ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತದತ್ತ ಸಾಗಿದೆ.

ಕಾಂಗ್ರೆಸ್ 17 ಸೀಟು ಗೆದ್ದು, 22 ರಲ್ಲಿ ಮುನ್ನಡೆ ಸಾಧಿಸಿದೆ ಒಟ್ಟು 39 ಸೀಟುಗಳು ಸಿಗುವ ಸಾಧ್ಯತೆ ಇದ್ದು ಸರ್ಕಾರ ರಚಿಸಲು ಬೇಕಾಗುವ ಬಹುಮತದತ್ತ ದಾಪುಗಾಲು ಹಾಕುತ್ತಿದೆ. ಬಿಜೆಪಿ 13 ಗೆದ್ದು, 13 ರಲ್ಲಿ ನುಮ್ಮಡೆ ಸಾಧಿಸಿ 26 ಸ್ಥಾನಗಳನ್ನು ಪಡೆಯುವ ಸಾಧ್ಯತೆ ಇದೆ, ಆಪ್ ಶೂನ್ಯ ಸಂಪಾದನೆ ಮಾಡಿದೆ. ಇಲ್ಲಿಯೂ ಕೂಡಾ ಸ್ವತಂತ್ರ ಅಭ್ಯರ್ಥಿಗಳು 3 ಸೀಟು ಗೆದ್ದಿದ್ದಾರೆ. ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅವರು ರಾಜೀನಾಮೆಯನ್ನು ರಾಜ್ಯಪಾಲರಿಗೆ ಸಲ್ಲಿಸುವುದಾಗಿ ಘೋಷಿಸಿದ್ದಾರೆ ಎಂದು ಡಿಡಿ ನ್ಯೂಸ್ ವರದಿ ಮಾಡಿದೆ.

ದೆಹಲಿ ಎಮ್.ಸಿ.ಡಿ ನಲ್ಲಿ ಆಪ್ ಬಹುಮತ

250-ಸದಸ್ಯರ ಪುನರ್‌ಏಕೀಕೃತ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್‌ನಲ್ಲಿ 134 ಸ್ಥಾನಗಳಲ್ಲಿ ಆಪ್ ಗೆದ್ದಿದ್ದರೆ, ಬಿಜೆಪಿ 104 ಸ್ಥಾನಗಳನ್ನು ಗೆದ್ದಿದೆ.

ಮಾಹಿತಿ: ಭಾರತೀಯ ಚುನಾವಣಾ ಆಯೋಗ