ತಂಡದ ನಾಲ್ವರಿಗೆ ವಿಧಾನ ಪರಿಷತ್ ಟಿಕೆಟ್! ವಿಜಯೇಂದ್ರ ಅವರಿಗೆ ಬೇರೆ ಅವಕಾಶ: ಬಿಜೆಪಿ ರಾಜ್ಯಾಧ್ಯಕ್ಷ

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಬಿಜೆಪಿ ಇಂದು ಘೋಷಿಸಿದ್ದು, ಈ ಹಿನ್ನೆಲೆಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ನನ್ನ ತಂಡದ ನಾಲ್ಕು ಜನರಿಗೆ‌ ಟಿಕೆಟ್‌ ಸಿಕ್ಕಿದ್ದು‌,‌ ಬಿ.‌ವೈ.ವಿಜಯೇಂದ್ರ ಅವರಿಗೆ ಬೇರೆ ಬೇರೆ ಅವಕಾಶಗಳು ಇವೆ ಎಂದು ಜಗನ್ನಾಥ ಭವನದಲ್ಲಿ ಹೇಳಿದರು.

ಕೋರ್ ಕಮಿಟಿ ಸಭೆಯಲ್ಲಿ ವಿಜಯೇಂದ್ರ ಅವರ ಹೆಸರನ್ನು ಸರ್ವ ಸಮ್ಮತಿಯಿಂದ ಶಿಫಾರಸು ಮಾಡಿದ್ದೆವು. ಆದರೆ ಅವರಿಗೆ ಬೇರೆ ಬೇರೆ ಅವಕಾಶಗಳು ಇವೆ. ಹಾಗಾಗಿ ಎಲ್ಲ ಲೆಕ್ಕಾಚಾರಗಳನ್ನು ಹಾಕಿಯೇ ಈಗ ಅಭ್ಯರ್ಥಿಗಳ ಆಯ್ಕೆ ಮಾಡಲಾಗಿದೆ. ಸದ್ಯ ವಿಜಯೇಂದ್ರ ರಾಜ್ಯದ ಉಪಾಧ್ಯಕ್ಷರು, ಅವರು ಇನ್ನಷ್ಟು ಕಾರ್ಯಗಳನ್ನು ಮಾಡಬೇಕಿದೆ‌. ಅವರ ಹೆಸರನ್ನು ನಮ್ಮ ಕಡೆಯಿಂದ ಘೋಷಣೆ ಮಾಡಲಾಗಿತ್ತು. ಆದರೆ ರಾಷ್ಟ್ರೀಯ ನಾಯಕರು ಎಲ್ಲ ವಿಚಾರಗಳನ್ನು ತಿಳಿದುಕೊಂಡೇ ಯೋಚನೆ ಮಾಡಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ವಿಜಯೇಂದ್ರಗೆ ವಿಧಾನ ಪರಿಷತ್ ಟಿಕೆಟ್ ಕೈತಪ್ಪಿರುವ ಬಗ್ಗೆ ವಿವರಣೆ ನೀಡಿದರು.

ನಾವು ರಾಜ್ಯದಿಂದ 20 ಹೆಸರುಗಳನ್ನು ಕಳಿಸಿಕೊಟ್ಟಿದ್ದೆವು. ಆದರೆ ನಾಲ್ಕು ಸ್ಥಾನ ಮಾತ್ರ ಇದ್ದಿದ್ದರಿಂದ, ನಾಲ್ಕು ಜನಕ್ಕೆ ಅವಕಾಶ ಕೊಟ್ಟಿದ್ದಾರೆ. ಒಳ್ಳೆಯ ಮಾನದಂಡದಿಂದ ನಾಲ್ವರ ಆಯ್ಕೆಮಾಡಲಾಗಿದೆ ಮತ್ತು ಮುಂದಿನ ದಿನಗಳಲ್ಲಿ 20 ಜನರಿಗೂ ಅವಕಾಶ ಸಿಗಲಿದೆ.

ಲಕ್ಷ್ಮಣ ಸವದಿ ರಾಜ್ಯದ ಉಪಾಧ್ಯಕ್ಷರಾಗಿದ್ದಾರೆ, ಹೇಮಲತಾ ನಾಯಕ್ ಕಾರ್ಯದರ್ಶಿಯಾಗಿದ್ದಾರೆ, ಚಲವಾದಿ ನಾರಾಯಣಸ್ವಾಮಿ ಎಸ್ ಸಿ ಮೋರ್ಚಾ ರಾಜ್ಯಾಧ್ಯಕ್ಷ, ಕೇಶವಪ್ರಸಾದ್ ಕಾರ್ಯದರ್ಶಿ ಮತ್ತು ಪ್ರಭಾರಿಯಾಗಿದ್ದಾರೆ. ನಮ್ಮ ತಂಡದ ನಾಲ್ಕು ಜನ ಇವತ್ತು ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಆಯ್ಕೆಯಾಗುತ್ತಿರುವುದರಿಂದ ಇದು ಬಹಳ ಸಂತೋಷದ ದಿನವಾಗಿದೆ.

ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಬಸವರಾಜ್ ಹೊರಟ್ಟಿ ಅವರ ಹೆಸರನ್ನು ಪ್ರಕಟಿಸಿದ್ದಾರೆ. ಅವರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಬಹಳ ವರ್ಷಗಳ ಅನುಭವ ಇರುವ, ಹಿರಿತನ ಇರುವ ನಾಯಕರು ಹೊರಟ್ಟಿ. ಬಹಳ ವರ್ಷ ಜೆಡಿಎಸ್ ವಿಚಾರಧಾರೆಯಲ್ಲಿದ್ದು, ಈಗ ಪಕ್ಷಕ್ಕೆ ಬಂದು ಅಭ್ಯರ್ಥಿಯಾಗಿದ್ದಾರೆ ಎಂದು ಕಟೀಲ್ ಹೇಳಿದರು.